ನವದೆಹಲಿ:ಮುಸ್ಲಿಮೇತರ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರುದ್ಧ ಸುಪ್ರೀಂಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನೂ ಏಕಕಾಲಕ್ಕೆ ಏಪ್ರಿಲ್ 9 ರಂದು ವಿಚಾರಣೆ ನಡೆಸಲು ಕೋರ್ಟ್ ದಿನಾಂಕ ನಿಗದಿಪಡಿಸಿದ್ದು, ಇದಕ್ಕೂ ಮೊದಲು ರೂಪಿಸಲಾದ ನಿಯಮಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರಕ್ಕೆ 3 ವಾರಗಳ ಗಡುವು ನೀಡಿದೆ.
ಮಾರ್ಚ್ 11 ರಂದು ಜಾರಿಯಾದ ಸಿಎಎ ನಿಯಮಗಳಿಗೆ ತಡೆ ನೀಡಬೇಕು ಎಂದು ಕೋರಿ 237 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಕೋರ್ಟ್ ಮಂಗಳವಾರ ಒಪ್ಪಿಕೊಂಡಿತು. ಅಲ್ಲದೇ, ಏಪ್ರಿಲ್ 9 ನೇ ತಾರೀಖಿನಂದು ವಿಚಾರಣೆಗೆ ಮುಹೂರ್ತ ನಿಗದಿಪಡಿಸಿತು. ಸಿಎಎ ತಡೆ ಕೋರಿ ಬಂದಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಎಎ ನಿಯಮಗಳ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕಾಯ್ದೆಯ ನಿಯಮಗ ಜಾರಿ ತಡೆಯಿರಿ:ಇಂದು ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಪೌರತ್ವ ನೀಡುವ ಸಿಎಎ ನಿಯಮಗಳಿಗೆ ತಡೆಯಾಜ್ಞೆ ನೀಡುವಂತೆ ಬಲವಾಗಿ ವಾದಿಸಿದರು. ಸರ್ಕಾರ ಜಾರಿಗೆ ತಂದಿರುವ ನಾಗರಿಕತ್ವ (ತಿದ್ದುಪಡಿ) ಕಾಯಿದೆಯ ನಿಯಮಗಳ ಅನುಸಾರ ಪೌರತ್ವ ಪಡೆದ ವ್ಯಕ್ತಿಗಳು ಮತದಾನ ಮಾಡಲು ಅರ್ಹರೇ?. ಈ ಕಾಯ್ದೆ ಜಾರಿ ತಡೆಯಬೇಕು ಎಂದು ಅವರು ಕೋರಿದರು.