ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಮಾತಿನ ಯುದ್ಧ ನಡೆಯುತ್ತಿದ್ದರೆ, ಇತ್ತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಕಾಂಗ್ರೆಸ್‌ನ ಇಬ್ಬಗೆ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.
ಡಾ.ಸಿಂಗ್ ಅವರ ಸ್ಮಾರಕವನ್ನು ಅಂತ್ಯಕ್ರಿಯೆ ನಡೆಸಲಾದ ನಿಗಮ್ ಬೋಧ್ ಘಾಟ್‌ನಲ್ಲಿ ನಿರ್ಮಿಸಬೇಕು ಎಂದು ಕಾಂಗ್ರೆಸ್ ಕೋರಿದೆ. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಸಂತಾಪ ಸಭೆ ಕೂಡ ನಡೆಸಲಿಲ್ಲ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕ ನಿರ್ಮಾಣ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬರೆದಿರುವ ಪತ್ರವನ್ನ ಟೀಕಿಸಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು, ನನ್ನ ತಂದೆ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2020ರ ಆಗಸ್ಟ್ನಲ್ಲಿ ನಿಧನರಾದಾಗ, ಕಾಂಗ್ರೆಸ್ ಪಕ್ಷವು ಕನಿಷ್ಠ ತನ್ನ ಕಾರ್ಯಕಾರಿ ಸಮಿತಿಯಲ್ಲಿ (CWC) ಸಂತಾಪ ಸೂಚಕ ಸಭೆಯನ್ನೂ ನಡೆಸಲಿಲ್ಲ ಎಂದು ಬೇಸರಿಸಿದ್ದಾರೆ.
When baba passed away, Congress didnt even bother 2 call CWC 4 condolence meeting. A senior leader told me it’s not done 4 Presidents. Thats utter rubbish as I learned later from baba’s diaries that on KR Narayanan’s death, CWC was called & condolence msg was drafted by baba only https://t.co/nbYCF7NsMB
— Sharmistha Mukherjee (@Sharmistha_GK) December 27, 2024
ತಮ್ಮ ತಂದೆಯವರ ಸ್ಮಾರಕಕ್ಕಾಗಿ ಕಾಂಗ್ರೆಸ್ ಎಂದೂ ಧ್ವನಿ ಎತ್ತಿಲಿಲ್ಲ ಯಾಕೆ?. ಈ ಬಗ್ಗೆ ಆ ಪಕ್ಷದ ನಾಯಕರು ನನ್ನ ದಾರಿ ತಪ್ಪಿಸಿದರು. ರಾಷ್ಟ್ರಪತಿಗಳಿಗೆ ಸಂತಾಪ ಸೂಚಕ ಸಭೆ ಮತ್ತು ಸ್ಮಾರಕ ನಿರ್ಮಾಣದ ಪದ್ಧತಿ ಇಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಇನ್ನೊಬ್ಬ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ನಿಧನ ಹೊಂದಿದಾಗ, ಸಿಡಬ್ಲ್ಯೂಸಿ ಸಭೆ ಕರೆದು ಸಂತಾಪ ಸೂಚಿಸಲಾಗಿತ್ತು. ಅದನ್ನು ನಾನು ನನ್ನ ತಂದೆಯ ಡೈರಿಯಿಂದ ತಿಳಿದುಕೊಂಡಿದ್ದೇನೆ. ಈ ಸತ್ಯವನ್ನು ಸ್ವತಃ ಪ್ರಣಬ್ ಮುಖರ್ಜಿ ಅವರೇ ಬರೆದುಕೊಂಡಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು ನನಗೆ ಸುಳ್ಳು ಹೇಳಿದ್ದರು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ನದ್ದು ದ್ವಿಮುಖ ನೀತಿ: ಡಾ.ಸಿಂಗ್ ಸ್ಮಾರಕಕ್ಕಾಗಿ ಧ್ವನಿ ಎತ್ತುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಮಾಜಿ ಪ್ರಧಾನಿ ನರಸಿಂಹರಾವ್ ಅವರ ನಿಧನದ ಬಳಿಕ ಅವರಿಗೆ ದೆಹಲಿಯಲ್ಲಿ ಅಂತಿಮ ವಿದಾಯ ಹೇಳಲೂ ಸಹ ಕಾಂಗ್ರೆಸ್ ಬಯಸಲಿಲ್ಲ. ಹೈದರಾಬಾದ್ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಯುಪಿಎ ಸರ್ಕಾರವಿದ್ದರೂ ರಾವ್ ಅವರ ಸ್ಮಾರಕವನ್ನು ನಿರ್ಮಿಸಿರಲಿಲ್ಲ.
2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನರಸಿಂಹರಾವ್ ಅವರ ಸ್ಮಾರಕ ನಿರ್ಮಿಸಿ, 2024 ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದರು. ಇದು ಕಾಂಗ್ರೆಸ್‌ನ ದ್ವಿಮುಖ ನೀತಿಯಾಗಿದೆ. ತತ್ವರಹಿತ ಕಾಂಗ್ರೆಸ್‌ನ ಐತಿಹಾಸಿಕ ಪಾಪಗಳನ್ನು ರಾಷ್ಟ್ರವು ಎಂದಿಗೂ ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಮನಮೋಹನ್ ಸಿಂಗ್ ಸ್ಮಾರಕಕ್ಕಾಗಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ಟಾಕ್ ಫೈಟ್