ಶಿಮ್ಲಾ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಪಿಂಚಣಿ ಸೌಲಭ್ಯ ನಿರಾಕರಿಸುವ ಹಿಮಾಚಲ ಪ್ರದೇಶ ವಿಧಾನಸಭೆ (ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ 2024ನ್ನು ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುಖ್ವಿಂದರ್ ಸುಖು, ಪಕ್ಷಾಂತರಿಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡಿದ್ದಕ್ಕಾಗಿ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರನ್ನು ಶ್ಲಾಘಿಸಿದರು. ಈ ಮಸೂದೆಯು ಪ್ರಜಾಪ್ರಭುತ್ವದ ಉನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯಲಿದೆ ಮತ್ತು ನಮ್ಮ ವ್ಯವಸ್ಥೆಯೊಳಗಿನ ಭ್ರಷ್ಟ ಕೃತ್ಯಗಳನ್ನು ತಡೆಯಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
"ತಮ್ಮ ಮಾತೃ ಪಕ್ಷಕ್ಕೆ ದ್ರೋಹ ಬಗೆದ ಆರು ಸದಸ್ಯರ ಕೃತ್ಯವು ತಮ್ಮದೇ ಪಕ್ಷದ ವಿರುದ್ಧ ಮಾತ್ರವಲ್ಲದೇ ಪ್ರಜಾಪ್ರಭುತ್ವದ ತತ್ವಗಳಿಗೂ ವಿರುದ್ಧವಾಗಿದೆ" ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರು ಪಕ್ಷದ ವಿಪ್ ಅನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದರು. ಫೆಬ್ರವರಿ 28 ರಂದು ವಿಧಾನಸಭೆಯಲ್ಲಿ ಪಕ್ಷಾಂತರಿಗಳು ಕಲಾಪಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ ಘಟನೆಯನ್ನು ಅವರು ಉಲ್ಲೇಖಿಸಿದರು. ಅವತ್ತು ವಿಧಾನಸಭೆಯ ಒಳಗೆ ಗೂಂಡಾಗಿರಿಯ ಬಹಿರಂಗ ಪ್ರದರ್ಶನವಾಗಿದೆ ಮತ್ತು ಅಂಥ ಕೃತ್ಯಗಳನ್ನು ತಡೆಗಟ್ಟಲು ಕಠಿಣ ಕ್ರಮ ಅಗತ್ಯವೆಂದು ಅವರು ಒತ್ತಿ ಹೇಳಿದರು.