ನವದೆಹಲಿ: ಆಮದು ಸುಂಕ ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. 2014ರಿಂದೀಚೆಗೆ ತೆರಿಗೆ ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ ಮತ್ತು ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯನ್ನು 2014ರ ಹಣಕಾಸು ವರ್ಷದಲ್ಲಿ 93 ದಿನಗಳಿಂದ 10 ದಿನಗಳಿಗೆ ಇಳಿಸಲಾಗಿದೆ ಮತ್ತು ಮರುಪಾವತಿಯನ್ನು ತ್ವರಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ವೈಯಕ್ತಿಕ ಆದಾಯ ತೆರಿಗೆಯ ಬಗ್ಗೆ ಐದು ಪ್ರಮುಖ ಘೋಷಣೆಗಳನ್ನು ಮಾಡಿದ್ದರು. ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ಆಗಿದ್ದರೂ, ತೆರಿಗೆ ಪಾವತಿದಾರರು ಹಳೆಯದನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು ಎಂದು ಆಗ ಅವರು ಹೇಳಿದ್ದರು. ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲು ಸೀತಾರಾಮನ್ ಪ್ರಸ್ತಾಪಿಸಿದ್ದರು. ಹೀಗಾಗಿ ವ್ಯಕ್ತಿಯೊಬ್ಬ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದರೆ, ಅವನು ಅಥವಾ ಅವಳು ವಾರ್ಷಿಕ ಆದಾಯ 7 ಲಕ್ಷ ರೂ.ಗಳವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.