ಪಾಟ್ನಾ (ಬಿಹಾರ):ಆರ್ಜೆಡಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಇಂದು ಮಧ್ಯಾಹ್ನ ರಾಜೀನಾಮೆ ನೀಡಿದ್ದ ಜೆಡಿಯು ನಾಯಕ ನಿತೀಶ್ಕುಮಾರ್ ಸಂಜೆ ವೇಳೆ ಬಿಜೆಪಿ ಬೆಂಬಲದೊಂದಿಗೆ ದಾಖಲೆಯ 9ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.
ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಿದರು. ಜೊತೆಗೆ ಬಿಜೆಪಿ ನಾಯಕರಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಡಿಸಿಎಂಗಳಾಗಿ ಪ್ರತಿಜ್ಞಾವಿಧಿ ಪಡೆದರು. 6 ಮಂದಿ ಸಚಿವರೂ ಅಧಿಕಾರ ಬೋಧನೆ ಮಾಡಿದರು. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟಿಗೆ ತೆರೆಬಿತ್ತು.
ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ 8 ನಾಯಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಅದರಲ್ಲಿ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಡಿಸಿಎಂ ಆಗಿ, ಪ್ರೇಮ್ ಕುಮಾರ್ ಸಚಿವರಾಗಿ ಬೋಧನೆ ಪಡೆದರು. ಜೆಡಿಯುನಿಂದ ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರವೋನ್ ಕುಮಾರ್, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಅಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಮತ್ತು ಪಕ್ಷೇತರ ಶಾಸಕ ಸುಮಿತ್ ಕುಮಾರ್ ಸಿಂಗ್ ಅವರೂ ಪ್ರತಿಜ್ಞಾವಿಧಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೇರಿದಂತೆ ವಿವಿಧ ನಾಯಕರು ಹಾಜರಿದ್ದರು. ಬೆಳಗ್ಗೆಯಷ್ಟೇ ಆರ್ಜೆಡಿ, ಕಾಂಗ್ರೆಸ್ ಜೊತೆಗಿನ 18 ತಿಂಗಳ ಮೈತ್ರಿಗೆ ತಿಲಾಂಜಲಿ ಹೇಳಿದ ನಿತೀಶ್ಕುಮಾರ್, ಮಧ್ಯಾಹ್ನ ರಾಜ್ಯಪಾಲ ರಾಜೇಂದ್ರ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಬಳಿಕ ಬಿಜೆಪಿ ಜೊತೆಗೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಂಜೆ 5 ಗಂಟೆಗೆ ಪ್ರಮಾಣ ವಚನಕ್ಕಾಗಿ ಆಹ್ವಾನಿಸಲಾಗಿತ್ತು.