ಚೆನ್ನೈ: ಸಮುದ್ರದಾಳದ ಅನ್ವೇಷಣೆಗಾಗಿ ಮನುಷ್ಯರನ್ನು ಕಳುಹಿಸುವ ಸಿದ್ದತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದಡಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಿಂದ ಈ ಸಮುದ್ರಯಾನ ಯೋಜನೆ ನಡೆಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿ ಸಮುದ್ರದ ಆಳಕ್ಕೆ ಮನುಷ್ಯರನ್ನು ಸಂಶೋಧನೆಗಾಗಿ ಕಳುಹಿಸಲಾಗುವುದು
ಚೆನ್ನೈ ಮೂಲದ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್ಐಒಟಿ) ಸ್ವಾಯತ್ತ ಸಂಸ್ಥೆಯಾಗಿದ್ದು, ಸಮುದ್ರಾಳದ ಅಧ್ಯಯನಕ್ಕೆ ಮತ್ಸ್ಯ 6000 (MATSYA 6000) ಎಂಬ ವಾಹನವನ್ನು ತಯಾರಿಸಿದೆ. ಈ ಸಮುದ್ರಯಾನ ಯೋಜನೆ ಜಾರಿಗೆ 4,800 ಕೋಟಿ ವೆಚ್ಚ ಆಗಲಿದೆ ಎಂದು ಎನ್ಐಒಟಿ ನಿರ್ದೇಶಕ ಜಿಎ ರಾಮದಾಸ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇನ್ನು ಕೆಲವೇ ವಾರದಲ್ಲಿ ಚೆನ್ನೈನಲ್ಲಿ ಈ ಸಂಬಂಧ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಈ ಯೋಜನೆಯ ಮುಖ್ಯ ಉದ್ದೇಶ ಸಮುದ್ರದ 6 ಸಾವಿರ ಮೀಟರ್ ಅಡಿಯಲ್ಲಿ ಸಂಶೋಧನೆ ಮಾಡುವುದಾಗಿದೆ. ಮೊದಲ ಹಂತದ ಬಂದರು ಪರೀಕ್ಷೆ ಸಮುದ್ರದಾಳದ 500 ಮೀಟರ್ ಅಡಿಯಲ್ಲಿ ನಡೆಯಲಿದೆ. ಸಮುದ್ರದ ಒಳಗೆ ಮೂರು ಜನರು ಹೋಗಬಹುದು. ಮೇಲ್ಮೈಯಲ್ಲಿರುವ ಖನಿಜ ಸಂಪನ್ಮೂಲ ನೇರವಾಗಿ ನೋಡಬಹುದಾಗಿದೆ.
ಚೆನ್ನೈನ ಪಲ್ಲಿಕರಣೈನಲ್ಲಿರುವ ಎನ್ಐಒಟಿ ಕ್ಯಾಂಪಸ್ನಲ್ಲಿನ ಪಲ್ಲಿಕರಣೈಯಲ್ಲಿ ಈ ಯೋಜನೆಯ ವಾಹನವನ್ನು ಇರಿಸಲಾಗಿದ್ದು, ಇದು ಗೋಲಾಕಾರವಾಗಿದ್ದು, ಇದರಲ್ಲಿ ಜನರು ಪ್ರಯಾಣ ಮಾಡಬಹುದಾಗಿದೆ ಎಂದು ರಾಮದಾಸ್ ತಿಳಿಸಿದ್ದಾರೆ. ಇದು 6.6 ಮೀಟರ್ ಉದ್ದ ಮತ್ತು 210 ಟನ್ ತೂಕವನ್ನು ಹೊಂದಿದ್ದು, ನೀರಿನೋಳಗೆ 48 ಗಂಟೆಗಳ ಕಾಲ ಸಂಶೋಧನೆ ನಡೆಸುವ ಸಾಮರ್ಥ್ಯ ಹೊಂದಿದೆ.