ಸುಕ್ಮಾ (ಛತ್ತೀಸ್ಗಢ):ಭದ್ರತಾ ಪಡೆ ಮೇಲೆ ದಾಳಿ ನಡೆಸಿ, 43 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 9 ನಕ್ಸಲರು ಸುಕ್ಮಾದಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಶರಣಾದ ತಂಡದಲ್ಲಿ ಇಬ್ಬರು ಮಹಿಳೆಯರು ಇದ್ದು, ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳ ಮುಂದೆ ಶರಣಾದರು. ಮಾವೋಗಳ ತತ್ವಗಳಲ್ಲಿನ ಟೊಳ್ಳು ಮತ್ತು ಅಮಾನವೀಯ ತತ್ವ ಹಾಗೂ ಸಂಘಟನೆಯಲ್ಲಿನ ಆಂತರಿಕ ಕಲಹದಿಂದ ಅವರು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಸುಕ್ಮಾ ಎಸ್ಪಿ ಕಿರಣ್ ಚವಾಣ್ ತಿಳಿಸಿದರು.
ಅಲ್ಲದೆ ರಾಜ್ಯ ಸರ್ಕಾರದ ನಿಯದ್ ನೆಲ್ಲನರ್ (ನಿಮ್ಮ ಉತ್ತಮ ಗ್ರಾಮ) ಯೋಜನೆಯಿಂದ ಕೂಡ ಪ್ರಭಾವಿತರಾಗಿರುವುದಾಗಿ ತಿಳಿಸಿದ್ದಾರೆ. ಈ ಯೋಜನೆಯು ಕುಗ್ರಾಮಗಳಿಗೆ ಅಭಿವೃದ್ಧಿ ಕಾರ್ಯದ ಸೌಲಭ್ಯ ಒದಗಿಸುತ್ತದೆ.
ಮಾವೊಗಳ ಪ್ಲಟೂನ್ ನಂಬರ್ 24 ಕಮಾಂಡರ್ ರನ್ಸಾಯಿ ಆಲಿಯಸ್ ಒಯಮ್ ಬುಸ್ಕಾ (34), ಪಿಎಲ್ಜಿಎ ಬೆಟಾಲಿಯನ್ ನಂ 1 ಪ್ರದೀಪ್ ಆಲಿಯಾಸ್ ರವ್ವಾ ರಾಕೇಶ್ (20) ಪತ್ತೆಗಾಗಿ 8 ಲಕ್ಷ ರೂ. ಹಣವನ್ನು ಘೋಷಿಸಲಾಗಿತ್ತು. ಇನ್ನು ಉಳಿದ ನಾಲ್ವರು 5 ಲಕ್ಷ ರೂ. ಹಾಗೂ ಓರ್ವ ಮಹಿಳಾ ನಕ್ಸಲರು 3 ಲಕ್ಷ, ಹಾಗೂ ಮಹಿಳೆಯರು ಸೇರಿದಂತೆ ಇನ್ನಿಬ್ಬರು ನಕ್ಸಲರು ತಲಾ 2 ಲಕ್ಷ ಹಣವನ್ನು ಸುಳಿವು ನೀಡಿದವರಿಗೆ ಘೋಷಿಸಲಾಗಿತ್ತು.