ನವದೆಹಲಿ: ಭಯೋತ್ಪಾದಕ ಕೃತ್ಯ ಎಸಗಲು ಬೆಂಗಳೂರು ಜೈಲಿನಲ್ಲೇ ಸಂಚು ರೂಪಿಸಿದ್ದ, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ್ದ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ರುವಾಂಡಾ ದೇಶ ಭಾರತಕ್ಕೆ ಹಸ್ತಾಂತರಿಸಿದ್ದು, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಭಾರತಕ್ಕೆ ಬೇಕಾಗಿದ್ದ ಈತ ರುವಾಂಡದಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ರುವಾಂಡಾ ತನಿಖಾ ಸಂಸ್ಥೆ, ಇಂಟರ್‌ಪೋಲ್ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ನಡುವಿನ ಸಮನ್ವಯದಿಂದಾಗಿ ಈತನ ಹಸ್ತಾಂತರ ಕಾರ್ಯ ನಡೆದಿದೆ.
ರುವಾಂಡಾದ ಕಿಗಾಲಿಯಲ್ಲಿ ಬಂಧಿಸಲಾದ ಸಲ್ಮಾನ್‌ನನ್ನು ನವೆಂಬರ್ 27ರ ಬೆಳಗ್ಗೆ ಭಾರತಕ್ಕೆ ಕರೆತರಲಾಗಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಜಾಮೀನುರಹಿತ ವಾರಂಟ್ ಹಾಗೂ ಇಂಟರ್‌ಪೋಲ್ ಹೊರಡಿಸಿದ್ದ ರೆಡ್ ನೋಟಿಸ್ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್ಐಎ, "ಬೆಂಗಳೂರು ಕಾರಾಗೃಹದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ಮತ್ತು ಇದಕ್ಕಾಗಿ ಯುವಕರ ನೇಮಕಾತಿ ನಡೆಸಿದ್ದ ಸಲ್ಮಾನ್‌ನನ್ನು ಎನ್ಐಎ ಆರ್‌ಐಬಿ, ಇಂಟರ್‌ಪೋಲ್ ಮತ್ತು ಎನ್ಸಿಬಿ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ನವೆಂಬರ್ 27ರಂದು ಬೆಳಗ್ಗೆ ಆತನನ್ನು ಭಾರತಕ್ಕೆ ಕರೆತರಲಾಯಿತು" ಎಂದು ತಿಳಿಸಿದೆ.
ರುವಾಂಡ ತನಿಖಾ ಸಂಸ್ಥೆ ಹೊರಡಿಸಿರುವ ಹೇಳಿಕೆಯಲ್ಲಿ, "ಗಡಿಯಾಚೆಗಿನ ಅಪರಾಧಗಳ ವಿರುದ್ಧ ಹೋರಾಟದ ಅಂತಾರಾಷ್ಟ್ರೀಯ ಸಹಕಾರದ ಚೌಕಟ್ಟಿನಲ್ಲಿ ಭಾರತಕ್ಕೆ ಬೇಕಾಗಿದ್ದ ಸಲ್ಮಾನ್ ಖಾನ್ ಆಲಿಯಾಸ್ ಸಲ್ಮಾ (30)ಎಂಬಾತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಭಾರತ ಹೊರಡಿಸಿದ್ದ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರವಾಗಿ ಕಿಗಲಿಯಲ್ಲಿ ವಶಕ್ಕೆ ಪಡೆಯಲಾಯಿತು. ಈ ಹಸ್ತಾಂತರದ ಮೂಲಕ ರುವಾಂಡಾ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ" ಎಂದು ತಿಳಿಸಿದೆ.
ಯಾರೀತ ಸಲ್ಮಾನ್?:ಸ್ಫೋಟ ಪ್ರಕರಣಕ್ಕೆ ನೆರವು ನೀಡಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಳಿಕ ಎನ್ಐಎ ತನಿಖೆ ಕೈಗೊಂಡಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಈತ ಸಹಾಯ ಮಾಡಿದ್ದ ಎಂಬ ಗಂಭೀರ ಆರೋಪವಿದೆ. ಭಯೋತ್ಪಾದಕ ಸಂಘಟನೆಗಳ ಜೊತೆಗೆ ಈತನ ನಂಟು ಬಹಿರಂಗವಾದ ಬಳಿಕ ದೇಶ ತೊರೆದು ಪರಾರಿಯಾಗಿದ್ದ. ಈತನ ಬಂಧನಕ್ಕೆ ಎನ್ಐಎ ಇಂಟರ್‌ಪೋಲ್ ಮೂಲಕ ಸಹಾಯ ಕೇಳಿತ್ತು.
ಇದನ್ನೂ ಓದಿ: ಸೈಬರ್ ಕ್ರೈಂ ಅಪರಾಧಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರವೇ ಟಾಪ್: ರಾಜ್ಯದಲ್ಲಿ ಅರೆಸ್ಟ್ ಆಗಿದ್ದು 3, ಶಿಕ್ಷೆ ಶೂನ್ಯ!