ನವದೆಹಲಿ: ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಮತ್ತೋರ್ವ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇದೇ ವೇಳೆ, ಇನ್ನಿಬ್ಬರು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್ಶೀಟ್ ದಾಖಲಿಸಿದೆ. ಶಿವಮೊಗ್ಗದ ಐಎಸ್ಐಎಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೋಡೆ ಬರಹ ವಿಷಯವಾಗಿ ತನಿಖಾ ತಂಡವು ಈ ಚಾರ್ಜ್ಶೀಟ್ ದಾಖಲಿಸಿದೆ. ಮಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್), ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ತಾಲಿಬಾನ್ ಬೆಂಬಲಿಸಿ ಗೋಡೆ ಬರಹ ಬರೆಯಲಾಗಿತ್ತು.
ಈ ಸಂಬಂಧ ಇಂದು ಸಲ್ಲಿಸಲಾದ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಎನ್ಐಎ, ಹೊಸದಾಗಿ ಅರಾಫತ್ ಅಲಿ ಎಂಬಾತನ ಹೆಸರನ್ನೂ ಕೂಡಾ ಸೇರಿಸಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಆರೋಪಿಸಲಾಗಿದ್ದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ವಿರುದ್ಧ ಹೆಚ್ಚುವರಿ ಚಾರ್ಜ್ಶೀಟ್ ದಾಖಲಿಸಿದೆ.
2020ರ ಜನವರಿಯಲ್ಲಿ ಗೋಡೆ ಬರಹ ಬರೆಯಲು ಇತರ ಆರೋಪಿಗಳನ್ನು ಅರಾಫತ್ ನೇಮಿಸಿಕೊಂಡಿದ್ದ. 2023ರ ಸೆಪ್ಟೆಂಬರ್ 14 ರಂದು ಕೀನ್ಯಾದಿಂದ ಭಾರತಕ್ಕೆ ಹಿಂದಿರುಗಿದ ನಂತರ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಎನ್ಐಎ ಬಂಧಿಸಿತ್ತು. ಹಿಂದಿನ ಮತ್ತೊಂದು ಅಲ್ - ಹಿಂದ್ ಮಾಡ್ಯೂಲ್ ಪ್ರಕರಣದಲ್ಲಿ ಈತ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನ ಮಾಡಿದ್ದ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ ಜೊತೆ ನಂಟು ಸಹ ಹೊಂದಿದ್ದ ಎಂದು ತನಿಖಾ ದಳ ಹೇಳಿದೆ.