ನವದೆಹಲಿ:ಭಾರತದ ಆಡಳಿತ ವ್ಯವಸ್ಥೆ ಹೊಸ ಮೂರು ಅಪರಾಧ ಕಾನೂನುಗಳ ಅನುಷ್ಠಾನಕ್ಕೆ ಸಜ್ಜಾಗಿದೆ. ಹಳೆಯ ಕಾನೂನುಗಳಿಗೆ ಮಹತ್ತರ ಬದಲಾವಣೆ ಮಾಡಿ ರೂಪಿಸಲಾಗಿರುವ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್), ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್ಎ) ಕಾನೂನುಗಳು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಇವುಗಳ ಪ್ರಚಾರಕ್ಕಾಗಿ 40 ಲಕ್ಷ ಕಾರ್ಯಕರ್ತರು, 5.65 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಹೊಸ ಕಾನೂನುಗಳನ್ನು 2023 ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಚೆಗೆ ಈ ಕಾಯ್ದೆಗಳಿಗೆ ಸಹಿ ಹಾಕಿದ್ದರು. ಮುಂದಿನ ವಾರದಿಂದ ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಸಜ್ಜಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಹೊಸ ಕಾನೂನುಗಳ ಜಾರಿ ಮತ್ತು ಮಾಹಿತಿಯ ವಿಚಾರದಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯ ವೆಬಿನಾರ್‌ಗಳ ಮೂಲಕ ಹೊಸ ಕಾನೂನುಗಳ ಬಗ್ಗೆ ಮಾಹಿತಿ ನೀಡಿದೆ. ಇದಕ್ಕಾಗಿ ಸುಮಾರು 40 ಲಕ್ಷ ತಳಮಟ್ಟದ ಕಾರ್ಯಕರ್ತರನ್ನು ಬಳಸಿಕೊಂಡಿದೆ.
ಕಾನೂನು ವ್ಯವಹಾರಗಳ ಇಲಾಖೆಯು ದೆಹಲಿಯಲ್ಲಿ ನಾಲ್ಕು ಸಮ್ಮೇಳನಗಳನ್ನು ನಡೆಸಿದೆ. ಇದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗವು 1,200 ವಿಶ್ವವಿದ್ಯಾನಿಲಯಗಳು ಮತ್ತು 40 ಸಾವಿರ ಕಾಲೇಜುಗಳಲ್ಲಿ ಪ್ರಚುರ ಪಡಿಸಿದೆ.
ಹೊಸ ಕಾನೂನುಗಳ ಪ್ರಕಾರ ನಡೆಯುವ ತನಿಖೆ, ವಿಚಾರಣೆಗಳು, ನ್ಯಾಯಾಲಯಗಳ ಸಮನ್ಸ್ಗಳ ವಿಡಿಯೋ ಮತ್ತು ಫೋಟೋಗ್ರಫಿಗಳನ್ನು ಸರಳವಾಗಿ ಪಡೆದುಕೊಳ್ಳಲು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್ಐಸಿ) eSakshya, NyayShruti ಮತ್ತು eSummon ಆ್ಯಪ್ಗಳನ್ನು ಅಭಿವೃದ್ಧಿಪಡಿಸಿದೆ.
ಕಾನೂನಿನಲ್ಲಿನ ಪ್ರಮುಖ ಅಂಶಗಳು:ಹೊಸ ಕಾನೂನಿನ ಪ್ರಕಾರ ವ್ಯಕ್ತಿಯು ಪೊಲೀಸ್ ಠಾಣೆಗೆ ತೆರಳಿಯೇ ದೂರು ನೀಡಬೇಕೆಂದಿಲ್ಲ. ತಾಂತ್ರಿಕ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೂಲಕವೇ ಈಗ ದೂರು ನೀಡಲು ಅವಕಾಶವಿದೆ. ಅದರಂತೆ ವಿವಿಧ ವಿಶೇಷತೆಗಳು ಇದರಲ್ಲಿವೆ.