ನವದೆಹಲಿ:ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಎರಡನೇ ದಿನದ ಮರು ಪರೀಕ್ಷೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ನಡೆದಿರುವ ಪರೀಕ್ಷೆಯನ್ನು ರದ್ದು ಮಾಡಿ, ಮರುಪರೀಕ್ಷೆಗೆ ಕೋರಿದ್ದ ಮನವಿಯನ್ನು ಮಂಗಳವಾರ ನಿರಾಕರಿಸಿದೆ.
ಈ ಕುರಿತು ಸಲ್ಲಿಸಲಾದ 48 ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು, ಈಗ ಬಿಡುಗಡೆ ಮಾಡಲಾದ ಪರೀಕ್ಷಾ ಫಲಿತಾಂಶವು ಸರಿಯಾಗಿದೆ. ಪರೀಕ್ಷಾ ಅಕ್ರಮವನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ ಎಂದು ಹೇಳಿದೆ.
ಪರೀಕ್ಷೆಯ ಪಾವಿತ್ರ್ಯತೆ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ ನೀಟ್ ಯುಜಿ 2024 ರ ಪರೀಕ್ಷೆಯನ್ನೇ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಆಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
NEET- UG ಪ್ರಶ್ನೆಪತ್ರಿಕೆ ಸೋರಿಕೆಯಾದ ವ್ಯಾಪ್ತಿಯು ದೊಡ್ಡದಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ಅಧಿಕಾರಿಗಳು ಹಜಾರಿಬಾಗ್ ಮತ್ತು ಪಾಟ್ನಾದ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಸಿರುವ ಸುಮಾರು 155 ವಿದ್ಯಾರ್ಥಿಗಳನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ವ್ಯಾಪ್ತಿಯ ಬಗ್ಗೆ ದೊಡ್ಡ ಅನುಮಾನವಿಲ್ಲ ಎಂದಿದೆ.
ಎನ್ಟಿಎಗೆ ಸುಪ್ರೀಂ ಚಾಟಿ:ಈ ಹಿಂದಿ ವಿಚಾರಣೆಯಲ್ಲಿ ನೀಟ್ ಪರೀಕ್ಷೆಯನ್ನು ನಡೆಸಿದ್ದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಚಾಟಿ ಬೀಸಿದ್ದ ಸುಪ್ರೀಂಕೋರ್ಟ್, ಪರೀಕ್ಷೆಯ ನಿರ್ವಹಣೆಯಲ್ಲಿ ವ್ಯವಸ್ಥಿತ ವೈಫಲ್ಯ ಕಂಡುಬಂದಿದೆ ಎಂದು ಮರು ಪರೀಕ್ಷೆಯನ್ನು ಕೋರಿದ ಅರ್ಜಿಯ ಬಗ್ಗೆ ಉತ್ತರಿಸಲು ಸೂಚಿಸಿತ್ತು. ಪೇಪರ್ ಸೋರಿಕೆಯು ವ್ಯಾಪಕವಾಗಿದೆ. ಪಾಟ್ನಾ ಮತ್ತು ಹಜಾರಿಬಾಗ್ ಮಾತ್ರ ಸೀಮಿತವಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಲು ಆದೇಶಿಸಲಾಗಿತ್ತು. ಇದನ್ನೇ ಅರ್ಜಿದಾರರು ಸುಪ್ರೀಂಕೋರ್ಟ್ ಮುಂದೆ ವಾದಿಸಿದ್ದರು.
ಇನ್ನೂ, NEET-UG 2024 ಪರೀಕ್ಷೆಯಲ್ಲಿ ಕೇಳಲಾದ ನಿರ್ದಿಷ್ಟ ಪ್ರಶ್ನೆಗಳನ್ನು ಮತ್ತು ಸೋರಿಕೆಯಾದ ಪ್ರಶ್ನೆಪತ್ರಿಕೆಗೆ ಸಾಮ್ಯತೆ ಮತ್ತು ಎನ್‌ಟಿಎ ಬಿಡುಗಡೆ ಮಾಡಿದ ಕೀ ಉತ್ತರಗಳನ್ನು ಪರೀಕ್ಷಿಸಲು ಮೂವರು ತಜ್ಞರ ತಂಡವನ್ನು ರಚಿಸಲು ಐಐಟಿ ದೆಹಲಿಯ ನಿರ್ದೇಶಕರಿಗೆ ಸೂಚಿಸಲಾಗಿತ್ತು. ತಜ್ಞರ ಸಮಿತಿಯು ನೀಟ್ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯ ಸರಿಯಾದ ಉತ್ತರಗಳನ್ನು ಕೋರ್ಟ್ಗೆ ಸಲ್ಲಿಸಿತ್ತು. ಎನ್‌ಟಿಎ ನೀಡಿದ್ದ ಉತ್ತರಗಳನ್ನು ಅದು ಒಪ್ಪಿತ್ತು.
ಇದನ್ನೂ ಓದಿ:NEET UG ಪರೀಕ್ಷೆಯ ಫಲಿತಾಂಶ ಪ್ರಕಟ; ರಿಸಲ್ಟ್ ವೀಕ್ಷಿಸಲು ಇಲ್ಲಿದೆ ಲಿಂಕ್ - NEET UG 2024 Result