ಕರ್ನಾಟಕ

karnataka

ETV Bharat / bharat

ಮತದಾನೋತ್ತರ ಸಮೀಕ್ಷೆಗಳ ಕುರಿತು ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು: ಚುನಾವಣಾ ಆಯೋಗ - EXIT POLLS

ಇತ್ತೀಚಿಗೆ ಕೊನೆಗೊಂಡ ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಈ ಹಿನ್ನೆಲೆಯಲ್ಲಿ ಇಂಥ ಸಮೀಕ್ಷೆಗಳ ಕುರಿತು ಕೇಂದ್ರ ಚುನಾವಣಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತ
ಕೇಂದ್ರ ಚುನಾವಣಾ ಆಯೋಗದ ಮಾಧ್ಯಮಗೋಷ್ಟಿ (ETV Bharat)

By ETV Bharat Karnataka Team

Published : Oct 15, 2024, 10:47 PM IST

ನವದೆಹಲಿ: ಮತ ಎಣಿಕೆಯ ದಿನದಂದು ಆರಂಭಿಕ ಟ್ರೆಂಡ್‌ಗಳನ್ನು ತೋರಿಸುವ ಸುದ್ದಿ ವಾಹಿನಿಗಳ ಅಭ್ಯಾಸವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಅಭ್ಯಾಸ 'ಅಸಂಬದ್ಧ' ಎಂದು ಹೇಳಿದ್ದಾರೆ.

ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲು ನವದೆಹಲಿಯಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.

ಇನ್ನು, ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್‌ ಪೋಲ್‌ಗಳು) ನಿರೀಕ್ಷೆಗಳನ್ನು ಹೆಚ್ಚಿಸಿ ದೊಡ್ಡ ಪ್ರಮಾಣದಲ್ಲಿ ಗಮನವನ್ನು ಬೇರೆಡೆ ಸೆಳೆಯುತ್ತವೆ. ಮಾಧ್ಯಮಗಳಿಗೆ ಅದರಲ್ಲೂ ಪ್ರಮುಖವಾಗಿ ಸುದ್ದಿವಾಹಿನಿಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಎಕ್ಸಿಟ್‌ ಪೋಲ್‌ಗಳು ನಮ್ಮ ಆಡಳಿತದ ವ್ಯಾಪ್ತಿಯಲ್ಲಿಲ್ಲ. ಹಾಗಿದ್ದರೂ ಕೂಡಾ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಎಕ್ಸಿಟ್‌ ಪೋಲ್‌ಗಾಗಿ ಸಂಗ್ರಹಿಸುವ ಮಾದರಿಗಳ (ಸ್ಯಾಂಪಲ್‌ಗಳು) ಗಾತ್ರವೇನು?, ಈ ಸಮೀಕ್ಷೆಗಳನ್ನು ಎಲ್ಲಿ ಮಾಡಲಾಗುತ್ತದೆ?, ಅದರ ಫಲಿತಾಂಶಗಳು ಹೇಗೆ ನಿರ್ಧಾರವಾಗುತ್ತವೆ?, ಒಂದು ವೇಳೆ ಅದು ನಿಜವಾದ ಫಲಿತಾಂಶಕ್ಕೆ ಹೋಲಿಕೆಯಾಗದಿದ್ದರೆ ತಮ್ಮ ಜವಾಬ್ದಾರಿ ಏನು? ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆಯೇ ಎಂಬುದು ಮುಖ್ಯವಾಗುತ್ತವೆ ಎಂದು ಅವರು ಚಾಟಿ ಬೀಸಿದರು.

ಸಂಘಟನೆಗಳಾದ ನ್ಯೂಸ್ ಬ್ರಾಡ್‌ಕಾಸ್ಟಿಂಗ್‌ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್‌ ಪ್ರಾಧಿಕಾರಗಳು ಸ್ವಲ್ಪ ಸ್ವಯಂ ನಿಯಂತ್ರಣ ಕ್ರಮಗಳಿಗೆ ಮುಂದಾಗಬೇಕಿದೆ ಎಂದು ಇದೇ ವೇಳೆ ಅವರು ಸಲಹೆ ನೀಡಿದರು.

ಸಾಮಾನ್ಯವಾಗಿ ಚುನಾವಣಾ ಪ್ರಕ್ರಿಯೆ ಕೊನೆಗೊಂಡ 3ನೇ ದಿನ ಮತಎಣಿಕೆ ನಡೆಯುತ್ತದೆ. ಫಲಿತಾಂಶದ ಕುರಿತ ನಿರೀಕ್ಷೆಗಳು ಅದಕ್ಕೂ ಮುನ್ನಾದಿನ 6 ಗಂಟೆಯಿಂದಲೇ ಶುರುವಾಗುತ್ತದೆ. ಹಾಗಾಗಿ, ಇಂಥ ಮತದಾನೋತ್ತರ ಸಮೀಕ್ಷೆಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಅವರು ಹೇಳಿದರು.

ಅಸಲಿಗೆ ಮತ ಎಣಿಕೆ ಆರಂಭವಾಗುವುದು ಯಾವಾಗ?, ಮಾಧ್ಯಮಗಳಲ್ಲಿ ಬೆಳಗ್ಗೆ 8.05 ಮತ್ತು 8.10ರಿಂದಲೇ ಫಲಿತಾಂಶ ಪ್ರಕಟಗೊಳ್ಳಲು ಶುರುವಾಗುತ್ತವೆ. ಇದು ಅಸಂಬದ್ಧ. ನಾವು ಮತ ಎಣಿಕೆ ಶುರು ಮಾಡುವುದೇ 8.30ಕ್ಕೆ ಎಂದು ಅವರು ಸ್ಪಷ್ಟಪಡಿಸಿದರು. ಎಕ್ಸಿಟ್‌ ಪೋಲ್‌ಗಳನ್ನು ಸಮರ್ಥಿಸಿಕೊಳ್ಳಲು ಈ ರೀತಿ ಆರಂಭಿಕ ಟ್ರೆಂಡ್‌ಗಳನ್ನು ತೋರಿಸಲಾಗುತ್ತದೆಯೇನೋ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಚುನಾವಣಾ ಆಯೋಗವು ಫಲಿತಾಂಶದ ಆರಂಭಿಕ ಟ್ರೆಂಡುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ 9.30ರ ನಂತರ ಪ್ರಕಟಿಸುತ್ತದೆ. ನಂತರ ಪ್ರತಿ 2 ಗಂಟೆಗಳಿಗೊಮ್ಮೆ ಪ್ರಕಟಿಸುತ್ತಾ ಹೋಗುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಎಣಿಕಾ ಕೇಂದ್ರಗಳಲ್ಲಿ ಸಂಬಂಧಪಟ್ಟ ಮಧ್ಯಮ ಪ್ರತಿನಿಧಿಗೆ ಫಲಿತಾಂಶಗಳು ಬೇಗನೆ ಸಿಗಬಹುದು. ಆದರೆ, ಚುನಾವಣಾ ಪ್ರಾಧಿಕಾರದ ಕೆಲಸ ಹಾಗಲ್ಲ. ನಾವು ಅಲ್ಲಿರುವ ಪರದೆಯಲ್ಲಿ ಫಲಿತಾಂಶಗಳನ್ನು ಮೊದಲು ಪ್ರಕಟಿಸಬೇಕು. ಅದಕ್ಕೆ ಪೋಲಿಂಗ್ ಏಜೆಂಟರುಗಳು ಸಹಿ ಹಾಕಬೇಕು. ಮತ್ತು ವೀಕ್ಷಕರಿಗೆ ಸಮರ್ಥನೆ ನೀಡಬೇಕು. ಈ ಪ್ರಕ್ರಿಯೆ 30 ನಿಮಿಷ ತೆಗೆದುಕೊಳ್ಳುತ್ತದೆ. ಇದಾದ ನಂತರವಷ್ಟೇ ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳುತ್ತದೆ. ಇದರಂದಾಗಿ, ನಿಜವಾದ ಫಲಿತಾಂಶ ಹೊರಬಂದಾಗ ಅಲ್ಲಿ ಹೊಂದಿಕೆಯಾಗದ ಪರಿಸ್ಥಿತಿ ಉಂಟಾಗುತ್ತದೆ. ಇಂಥ ಪರಿಸ್ಥಿತಿಗಳು ಕೆಲವೊಮ್ಮೆ ಗಂಭೀರ ಚರ್ಚೆಗಳಿಗೂ ಕಾರಣವಾಗುತ್ತವೆ. ನಿರೀಕ್ಷೆ ಮತ್ತು ಸಾಧನೆಯ ನಡುವಿನ ಅಂತರ ಹತಾಶೆ ಉಂಟುಮಾಡುತ್ತದೆ ಅಂದು ವಿವರಿಸಿದರು.

ಇತ್ತೀಚಿಗೆ ಮುಕ್ತಾಯಗೊಂಡ ಹರಿಯಾಣ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಿರುವುದನ್ನು ಕಾಂಗ್ರೆಸ್‌ ಪಕ್ಷ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಈ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆ: ಪ್ರಿಯಾಂಕಾ ಗಾಂಧಿ ವಾದ್ರಾಗೆ ಟಿಕೆಟ್

ABOUT THE AUTHOR

...view details