ಕರ್ನಾಟಕ

karnataka

ETV Bharat / bharat

ಎನ್​ಡಿಎ ಸರ್ಕಾರ ರಚನೆ ಕಸರತ್ತು: ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ - NDA Meeting

ಪ್ರಧಾನಿ ಮೋದಿ ನಿವಾಸದಲ್ಲಿಂದು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಾಯಕರ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.

NDA leaders held a meeting at residence of Modi.
ಪ್ರಧಾನಿ ಮೋದಿ ನಿವಾಸದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಸಭೆ ನಡೆಯಿತು. (ANI)

By PTI

Published : Jun 5, 2024, 6:58 PM IST

Updated : Jun 5, 2024, 7:11 PM IST

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ. ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು ಸೇರಿದಂತೆ ಮಿತ್ರಪಕ್ಷಗಳು ತಮ್ಮ ಬೆಂಬಲದ ಪತ್ರ ನೀಡಿವೆ. ಹೊಸ ಸರ್ಕಾರ ರಚನೆಗೆ ಜೂನ್​ 7ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಹಕ್ಕು ಮಂಡಿಸುವ ಸಾಧ್ಯತೆ ಇದೆ.

ಮೋದಿ ನಿವಾಸದಲ್ಲಿಂದು ಸಂಜೆ ಮೈತ್ರಿಕೂಟದ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ಅಮಿತ್​ ಶಾ, ರಾಜನಾಥ್ ಸಿಂಗ್​ ಹಾಗೂ ಜೆಡಿಯು ನಾಯಕ ನಿತೀಶ್​ ಕುಮಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಏಕನಾಥ್ ಶಿಂಧೆ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಜೊತೆಗೆ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಎನ್​ಸಿಪಿ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ಸೇರಿ ಇತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಎನ್​ಡಿಎ ಮೈತ್ರಿಕೂಟದ ನಿರ್ಣಯವನ್ನೂ ಅಂಗೀಕರಿಸಲಾಗಿದೆ.

''2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಒಗ್ಗಟ್ಟಿನಿಂದ ಹೋರಾಡಿ ಗೆಲುವು ಸಾಧಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ನಾವೆಲ್ಲ ಎನ್‌ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ನಮ್ಮ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ'' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

''ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ಸಮಾಜದ ವಂಚಿತ ವರ್ಗಗಳ ಸೇವೆಗೆ ಸರ್ಕಾರ ಬದ್ಧವಾಗಿದೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಜನಪರ ನೀತಿಗಳಿಂದಾಗಿ ಕಳೆದ 10 ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯಾಗುತ್ತಿರುವುದನ್ನು ಜನರು ನೋಡಿದ್ದಾರೆ'' ಎಂದೂ ನಿರ್ಣಯದಲ್ಲಿ ಹೇಳಲಾಗಿದೆ.

ಮಂಗಳವಾರ ಪ್ರಕಟವಾದ ಲೋಕಸಭೆ ಚುನಾವಣೆಯಲ್ಲಿ 293 ಸ್ಥಾನಗಳಲ್ಲಿ ಗೆಲುವು ಮೂಲಕ ಎನ್​ಡಿಎ ಮೈತ್ರಿಕೂಟವು ಸರಳ ಬಹುಮತವನ್ನು ಪಡೆದಿದೆ. ಈ ಮೂಲಕ 1962ರ ಮೊದಲ ಬಾರಿಗೆ ಸತತವಾಗಿ ಮೂರನೇ ಬಾರಿಗೆ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಎನ್​ಡಿಎ ಬರಲು ಸಜ್ಜಾಗಿದೆ. ಈಗ ಹೊಸ ಸರ್ಕಾರ ರಚನೆ ಕಸರತ್ತು ಆರಂಭಿಸಿದ್ದು, ಜೂನ್​ 8ರಂದು ಪ್ರಧಾನಿ ಹಾಗೂ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ:ಮೋದಿ ರಾಜೀನಾಮೆ ಸಲ್ಲಿಕೆ; ಜೂ.8ಕ್ಕೆ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ?

Last Updated : Jun 5, 2024, 7:11 PM IST

ABOUT THE AUTHOR

...view details