ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಎಲ್ಲ ಶಾಲೆಗಳಲ್ಲೂ ಬೆಳಗ್ಗೆ ರಾಷ್ಟ್ರಗೀತೆ ಗಾಯನ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಬುಧವಾರ ನಿರ್ದೇಶನ ಹೊರಡಿಸಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು- ಕಾಶ್ಮೀರದಾದ್ಯಂತ ಎಲ್ಲ ಶಾಲೆಗಳಲ್ಲಿ ಶಿಷ್ಟಾಚಾರದಂತೆ ರಾಷ್ಟ್ರಗೀತೆಯೊಂದಿಗೆ ಬೆಳಗಿನ ಅಸೆಂಬ್ಲಿ ಆರಂಭವಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
''ಶಾಲೆಗಳಲ್ಲಿ ಬೆಳಗ್ಗೆ 20 ನಿಮಿಷ ಅಸೆಂಬ್ಲಿ ನಡೆಯಬೇಕಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಸೇರಬೇಕು. ನೈತಿಕ ಸಮಗ್ರತೆ, ಎಲ್ಲರೂ ಒಟ್ಟಾಗಿ ಸೇರುವ ಮತ್ತು ಮಾನಸಿಕ ನೆಮ್ಮದಿಯ ಮೌಲ್ಯವನ್ನು ಪೋಷಿಸುವ ವೇದಿಕೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಇಂತಹ ಮಹತ್ವದ ಆಚರಣೆ, ಸಂಪ್ರದಾಯವನ್ನು ವಿವಿಧ ಶಾಲೆಗಳಲ್ಲಿ ಏಕರೂಪವಾಗಿ ನಡೆಸಲಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ'' ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.