ಮುಜಾಫರ್‌ನಗರ( ಉತ್ತರಪ್ರದೇಶ): ಖತೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟಾಕಿ ಕಾರ್ಖಾನೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಕಾರ್ಖಾನೆಯ ನಿರ್ವಾಹಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಖತೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲವಾಡ ಗ್ರಾಮದ ಮನೆಯೊಂದರಲ್ಲಿ ಪಟಾಕಿ ಕಾರ್ಖಾನೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ್ವಾರ ನಿವಾಸಿಗಳಾದ ದೀಪಾಂಶು ಮತ್ತು ಪಾರಸ್, ಬಹದ್ದೂರ್‌ಪುರ ಗ್ರಾಮದ ಬಿಟ್ಟು ಸೇರಿದಂತೆ ಹಲವರು ಇಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಮನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದರಿಂದ ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಪಘಾತದಲ್ಲಿ ಕೆಲ್ವಾರ ನಿವಾಸಿಗಳಾದ ಪಾರಸ್ ಮತ್ತು ದೀಪಾಂಶು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಿಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತು ಎಂದರೆ ಕಿಲೋಮೀಟರ್ಗಳ ದೂರದವರೆಗೆ ಸ್ಫೋಟದ ಸದ್ದು ಕೇಳಿಸಿದೆ. ಸ್ಫೋಟವು ಇಡೀ ಗ್ರಾಮದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಸ್ಫೋಟದ ಶಬ್ದ ಕೇಳಿ ಕೆಲವೇ ಸಮಯದಲ್ಲಿ ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಘಟನೆಯ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.