ಮೀರತ್ (ಉತ್ತರಪ್ರದೇಶ) :ದೆಹಲಿ ಮತ್ತು ಮೀರತ್ ನಡುವಿನ ರೈಲ್ವೆ ಕಾಮಗಾರಿಗೆ ಅಡ್ಡಿಯಾಗಿದ್ದ 168 ವರ್ಷಗಳ ಹಳೆಯ ಮಸೀದಿಯನ್ನು ತೆರವು ಮಾಡಲು ಮುಸ್ಲಿಮರು ಒಪ್ಪಿಗೆ ಸೂಚಿಸಿದ್ದಾರೆ. ಸಮುದಾಯದ ಅನುಮತಿಯ ಮೇರೆಗೆ ಅದನ್ನು ಕೆಡವುವ ಕಾರ್ಯ ಆರಂಭವಾಗಿದೆ.
ರೈಲ್ವೆ ಯೋಜನೆಗೆ ಮಸೀದಿಯು ಅಡ್ಡಿಯಾದ ಬಗ್ಗೆ ಜಿಲ್ಲಾಡಳಿವು ಸ್ಥಳೀಯರ ಗಮನಕ್ಕೆ ತಂದು ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿತ್ತು. ಕೊನೆಗೆ, ಸಮುದಾಯದ ಜನರು ಕಾಮಗಾರಿಗಾಗಿ ತಮ್ಮ ಪ್ರಾರ್ಥನಾ ಸ್ಥಳವನ್ನು ತೆರವು ಮಾಡಲು ಅನುಮತಿಸಿದ್ದಾರೆ.
ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆ (PWD) ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಜಂಟಿಯಾಗಿ ನಿರ್ವಹಿಸುತ್ತವೆ. ದೆಹಲಿ-ಮೀರತ್ ರಸ್ತೆಯು ಪಿಡಬ್ಲ್ಯುಡಿ ವ್ಯಾಪ್ತಿಗೆ ಬರುತ್ತದೆ. ಆದರೆ, ರೈಲ್ವೆ ಕಾರಿಡಾರ್ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ಇರುವ ಸ್ಥಳವು ಎನ್ಸಿಆರ್ಟಿಸಿ ಅಡಿಗೆ ಬರುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀರತ್ ಹೆಚ್ಚುವರಿ ಜಿಲ್ಲಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್, ಎರಡೂ ಇಲಾಖೆಗಳು ಮಸೀದಿ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಅಭಿವೃದ್ಧಿ ಕಾರ್ಯಗಳಿಗೆ ದಾರಿ ಮಾಡಿಕೊಡಲು ಅವಕಾಶ ಕೋರಲಾಯಿತು. ಅದರಂತೆ ಚರ್ಚೆಯ ಬಳಿಕ ಮಸೀದಿಯನ್ನು ತೆರವು ಮಾಡಲು ಅನುಮತಿಸಿದ್ದಾರೆ ಎಂದರು.
ಸ್ಥಳೀಯರಿಂದ ಯಾವುದೇ ವಿರೋಧವಿಲ್ಲದ ಹಿನ್ನೆಲೆಯಲ್ಲಿ ಮಸೀದಿ ಕೆಡವುವ ಕಾರ್ಯ ಆರಂಭಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ಅದನ್ನು ತೆರವು ಮಾಡಲಾಗುತ್ತಿದೆ ಎಂದರು ತಿಳಿಸಿದರು.
ತೆರವಿಗೆ ಜನರಿಂದ ನೆರವು :ಮಸೀದಿಯ ಮುಖ್ಯ ಬಾಗಿಲು ಸೇರಿದಂತೆ ಮುಂಭಾಗದ ಗೋಡೆಯ ತೆರವಿಗೆ ಜನರೇ ನೆರವು ನೀಡಿದರು. ಮಸೀದಿಯ ಆಡಳಿತ ಮಂಡಳಿಯೂ ಸಹಕರಿಸಿತು. ಮಸೀದಿಯು ಜನವಸತಿ ಪ್ರದೇಶದಲ್ಲಿರುವ ಕಾರಣ ಜನದಟ್ಟಣೆ ಉಂಟಾಗದಿರಲು ರಾತ್ರಿ ವೇಳೆ ಕಾರ್ಯಾಚರನೆ ನಡೆಸಲಾಗುಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಸೀದಿಗೆ 168 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಇದನ್ನು 1857 ರಲ್ಲಿ ನಿರ್ಮಿಸಲಾಗಿದೆ. ಇದರ ವಿರುದ್ಧ ಪ್ರಕರಣ ಇರುವ ಕಾರಣ, 1981 ರಲ್ಲಿ ಬಂದ್ ಮಾಡಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಸೀದಿಯಲ್ಲಿ ಚಟುವಟಿಕೆಗಳನ್ನು ಪುನಾರಂಭಿಸಲಾಗಿದೆ. ಇದೀಗ, ಅಭಿವೃದ್ಧಿಗಾಗಿ ತೆರವು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಭಾಲ್ ಘರ್ಷಣೆ ಕೇಸ್ :ಕೆಲ ದಿನಗಳ ಹಿಂದೆ, ಇಲ್ಲಿನ ಸಂಭಾಲ್ದಲ್ಲಿನ ಮಸೀದಿ ಸರ್ವೇಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಮಸೀದಿ ಇರುವ ಜಾಗದಲ್ಲಿ ಹಿಂದು ದೇವಾಲಯವಿದೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅದರ ಸಮೀಕ್ಷೆಗೆ ಕೋರ್ಟ್ ಸೂಚಿಸಿತ್ತು. ಸಮೀಕ್ಷೆಗೆ ಅಧಿಕಾರಿಗಳು ತೆರಳಿದಾಗ ಸಂಘರ್ಷ ಉಂಟಾಗಿತ್ತು.
ಇದನ್ನೂ ಓದಿ:ಸಲ್ಲಿಕೆಯಾಗದ ಸಂಭಾಲ್ ಜಾಮಾ ಮಸೀದಿ ಸಮೀಕ್ಷಾ ವರದಿ: ಯಥಾಸ್ಥಿತಿ ಪಾಲನೆಗೆ ಸುಪ್ರೀಂ ಕೋರ್ಟ್ ಸೂಚನೆ