ಲಖನೌ(ಉತ್ತರ ಪ್ರದೇಶ): ಲಿವ್ ಇನ್ ರಿಲೇಷನ್ಶಿಪ್ ಅಥವಾ ಸಹಜೀವನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖನೌ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ. ಇಸ್ಲಾಂ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಗೆ ತನ್ನ ಪತ್ನಿ ಜೀವಂತವಾಗಿರುವಾಗಲೇ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದು ತಿಳಿಸಿತು. ವಿವಾಹಿತ ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆಯ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಲಾಗಿದೆ.
ಪ್ರಕರಣವೇನು?: ಸಹಜೀವನ ನಡೆಸಲು ಇಚ್ಛಿಸಿದ್ದ ವಿವಾಹಿತ ಶಾದಾಬ್ ಖಾನ್ ಮತ್ತು ಹಿಂದೂ ಮಹಿಳೆಯೊಬ್ಬರು ತಮಗೆ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ನಾವು ವಯಸ್ಕರಾಗಿದ್ದು, ನಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ, ಅಪಹರಣದ ಆರೋಪದ ಮೇಲೆ ಮಹಿಳೆಯ ಸಹೋದರ ಬಹ್ರೈಚ್‌ನ ವಿಶೇಶ್ವರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್ ರದ್ದುಗೊಳಿಸಬೇಕು. ನಮ್ಮ ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗದಂತೆ ಆದೇಶ ನೀಡಬೇಕೆಂದು ಕೋರಿದ್ದರು.
ಹೈಕೋರ್ಟ್ ಹೇಳಿದ್ದೇನು?:ನ್ಯಾಯಮೂರ್ತಿ ಎ.ಆರ್.ಮಸೂದಿ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿ ವಿಚಾರಣೆ ನಡೆಸಿತು. ''ಪದ್ಧತಿ ಮತ್ತು ಸಂಪ್ರದಾಯಗಳು ಕಾನೂನಿನ ಸಮಾನ ಮೂಲಗಳಾಗಿವೆ. ಸಂವಿಧಾನದ 21ನೇ ವಿಧಿಯು ಪದ್ಧತಿಗಳು ಮತ್ತು ಸಂಪ್ರದಾಯಗಳಿಂದ ನಿರ್ಬಂಧಿಸಲ್ಪಟ್ಟಿರುವ ಅಂತಹ ಸಂಬಂಧದ ಹಕ್ಕನ್ನು ಒದಗಿಸುವುದಿಲ್ಲ'' ಎಂದು ನ್ಯಾಯಾಲಯ ತಿಳಿಸಿದೆ.