ಮುಂಬೈ: ಮುಂಬೈನ ಧಾರಾವಿ ಪ್ರದೇಶದ ಪುನರಾಭಿವೃದ್ಧಿಗಾಗಿ ಅದಾನಿ ಗ್ರೂಪ್ ರೂಪಿಸಿರುವ ಯೋಜನೆಗೆ ಸ್ಥಳೀಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ವಿಶ್ವದ ಅತಿದೊಡ್ಡ ಸ್ಲಂ ಆಗಿರುವ ಧಾರಾವಿಯನ್ನು 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡುವ ಯೋಜನೆಗಾಗಿ ಸಮೀಕ್ಷೆಯನ್ನು ಆರಂಭಿಸಲು ಇಲ್ಲಿನ ನಾಗರಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ಅದಾನಿ ಗ್ರೂಪ್ ನಡುವಿನ ಜಂಟಿ ಉದ್ಯಮವಾದ ಧಾರಾವಿ ಪುನರಾಭಿವೃದ್ಧಿ ಯೋಜನೆ ಪ್ರೈವೇಟ್ ಲಿಮಿಟೆಡ್ (ಡಿಆರ್ಪಿಪಿಎಲ್) ಮತ್ತು ರಾಜ್ಯ ಸರ್ಕಾರದ ಧಾರಾವಿ ಪುನರಾಭಿವೃದ್ಧಿ ಯೋಜನೆ ಪ್ರೈವೇಟ್ ಲಿಮಿಟೆಡ್ (ಡಿಆರ್ಪಿಪಿಎಲ್) ಈ ಸಮೀಕ್ಷೆಯ ನೇತೃತ್ವ ವಹಿಸಿವೆ.
ಉದ್ದೇಶಿತ ಪುನರಾಭಿವೃದ್ಧಿ ಯೋಜನೆಯಡಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅರ್ಹತಾ ಮಾನದಂಡಗಳನ್ನು ನಿರ್ಧರಿಸಿ, ಅವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಸಮೀಕ್ಷೆಯ ಉದ್ದೇಶವಾಗಿದೆ. ಈ ಉದ್ದೇಶಕ್ಕಾಗಿ ಇಲ್ಲಿನ ಲಕ್ಷಾಂತರ ನಿವಾಸಿಗಳ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸಮೀಕ್ಷೆಯು ಈ ವರ್ಷದ ಮಾರ್ಚ್ 18 ರಂದು ಪ್ರಾರಂಭವಾಗಿದೆ.
ಅತ್ಯಂತ ಜನನಿಬಿಡವಾದ ಈ ಕೊಳಗೇರಿಯನ್ನು ಆಧುನಿಕ ವಸತಿ ಮತ್ತು ಮೂಲ ಸೌಲಭ್ಯಗಳೊಂದಿಗೆ ಹೊಸ ವಸತಿ ನಗರವಾಗಿ ಪರಿವರ್ತಿಸಲು ಇಲ್ಲಿನ ಅನೌಪಚಾರಿಕ ಮನೆಗಳನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಧಾರಾವಿಯ ಭೌಗೋಳಿಕ ಪ್ರದೇಶ ವ್ಯಾಪ್ತಿ ಕೇವಲ 2.39 ಚದರ ಕಿ.ಮೀ. ಆಗಿದೆ.
ಈಗ, ಧಾರಾವಿ ನಿವಾಸಿಗಳ ನಾಗರಿಕ ಮತ್ತು ಸಮಾಜ ಅಭಿವೃದ್ಧಿ ಕಲ್ಯಾಣ ಸಂಸ್ಥೆ ಡಿಆರ್ಪಿ / ಎಸ್ಆರ್ಎಗೆ ಪತ್ರ ಬರೆದಿದ್ದು, ಪುನರಾಭಿವೃದ್ಧಿ ಕಾರ್ಯವನ್ನು ಯಾವುದೇ ವಿಳಂಬವಿಲ್ಲದೆ ಮುಂದುವರಿಸುವಂತೆ ಮತ್ತು ಸಮೀಕ್ಷೆಯನ್ನು ವೇಗವಾಗಿ ನಡೆಸುವಂತೆ ವಿನಂತಿಸಿದೆ. ಧಾರಾವಿ ಸಮೀಕ್ಷೆಯನ್ನು ತ್ವರಿತಗೊಳಿಸುವಂತೆ ಕೋರಿ ಕಲ್ಯಾಣ ಸಂಸ್ಥೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ಸಮೀಕ್ಷೆಗೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಹಿರಿಯ ಸಮೀಕ್ಷಾ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಅದಾನಿ ಗ್ರೂಪ್ ಪ್ರಕಾರ, ಧಾರಾವಿಯಲ್ಲಿನ ಪುನರಾಭಿವೃದ್ಧಿ ಯೋಜನೆಯು ಅದರ ಒಂದು ದಶಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಘನತೆಯ ಜೀವನವನ್ನು ಒದಗಿಸುವುದಲ್ಲದೆ, ಮುಂಬೈನ ಹೃದಯಭಾಗದಲ್ಲಿ ಸುಸ್ಥಿರ ಜೀವನ ಮತ್ತು ನಾವೀನ್ಯತೆಯ ವಸತಿ ಬಡಾವಣೆಯನ್ನು ಸೃಷ್ಟಿಸಲಿದೆ.
ಇಲ್ಲಿನ ನಿವಾಸಿಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರವು ಏಷ್ಯಾದ ಅತಿದೊಡ್ಡ ಕೊಳೆಗೇರಿಯ ಪುನರಾಭಿವೃದ್ಧಿಯನ್ನು ಪ್ರಾರಂಭಿಸಿದೆ. ಪುನರಾಭಿವೃದ್ಧಿ ಯೋಜನೆಯಡಿ, ವಸತಿ ಮಾಲೀಕರಿಗೆ 350 ಚದರ ಅಡಿ ಮನೆಯನ್ನು ನೀಡಲಾಗುವುದು. ಇದು ಮುಂಬೈನ ಇತರ ಎಸ್ಆರ್ಎ ಯೋಜನೆಗಿಂತ ಶೇಕಡಾ 17 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ :ರಾಜಸ್ಥಾನದಲ್ಲಿ ಗರ್ಭಿಣಿ ವಿವಸ್ತ್ರಗೊಳಿಸಿದ್ದ ಪ್ರಕರಣ: 14 ಜನರಿಗೆ 7 ವರ್ಷ ಜೈಲು ಶಿಕ್ಷೆ - Rajasthan Woman Stripping Case