ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಲೈಲಾ ಖಾನ್ ಕೊಲೆ ಪ್ರಕರಣದಲ್ಲಿ ಅವರ ಮಲತಂದೆ ಪರ್ವೇಜ್ ತಕ್ ದೋಷಿ ಎಂದು ಬಾಂಬೆ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗಿದೆ. ಪರ್ವೇಜ್ಗೆ ಸೆಕ್ಷನ್ 302ರ ಅಡಿಯಲ್ಲಿ ಮರಣದಂಡನೆ ವಿಧಿಸಲಾಗಿದೆ. ಸೆಕ್ಷನ್ 201ರ ಅಡಿಯಲ್ಲಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಾರ್ವಜನಿಕ ವಕೀಲ ಪಂಕಜ್ ರಾಮಚಂದ್ರ ಚವಾಣ್ ವಾದ ಮಂಡಿಸಿದ್ದರು. ಆರ್ಥರ್ ರೋಡ್ ಜೈಲಿನ ಅಂಡಾ ಸೆಲ್ ನಲ್ಲಿ ಪರ್ವೇಜ್ ನನ್ನು ಇರಿಸಲಾಗಿದೆ. ತೀರ್ಪಿನ ವೇಳೆ ಅವರ ತಾಯಿ, ತಂದೆ, ಪತ್ನಿ ಮತ್ತು ಮೂವರು ಪುತ್ರಿಯರು ನ್ಯಾಯಾಲಯದಲ್ಲಿ ಹಾಜರಿದ್ದರು. ಲೈಲಾ ಖಾನ್ ಜೊತೆಗೆ ಆಕೆಯ ನಾಲ್ವರು ಒಡಹುಟ್ಟಿದವರನ್ನ ಮತ್ತು ತಾಯಿಯನ್ನು 2011ರಲ್ಲಿ ಹತ್ಯೆ ಮಾಡಲಾಗಿತ್ತು. ಅವರು ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗೆ ಹಿಂದಿ ಚಿತ್ರದಲ್ಲಿ ನಟಿಸಿದ್ದರು.
ಪರ್ವೇಜ್ ವಿರುದ್ಧ ಕೊಲೆ, ಕೊಲೆಗೆ ಸಂಚು, ಸಾಕ್ಷ್ಯ ನಾಶದ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಆತನಿಗೆ ಶಿಕ್ಷೆಯಾಯಿತು. ನಾಸಿಕ್ ಬಳಿಯ ಇಗತ್ಪುರಿಯಲ್ಲಿರುವ ಲೈಲಾ ಅವರ ಬಂಗಲೆಯಲ್ಲಿ ಕೊಲೆ ನಡೆದಿದೆ ಎಂದು ತಿಳಿದು ಬಂದಿತ್ತು.
ಏನಿದು ಪ್ರಕರಣ, ಹಿನ್ನೆಲೆ ಏನು?;ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಪರ್ವೇಜ್ ಲೈಲಾ ಅವರ ತಾಯಿ ಶೆಲಿನಾ ಅವರ ಮೂರನೇ ಪತಿ. ಲೈಲಾ ಖಾನ್ ಮುನೀರ್ ಖಾನ್ ಅವರನ್ನು ವಿವಾಹವಾಗಿದ್ದರು. ಮುನೀರ್ ನಿಷೇಧಿತ ಬಾಂಗ್ಲಾದೇಶದ 'ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ' ಸಂಘಟನೆಯ ಸದಸ್ಯನಾಗಿದ್ದ ಎಂಬ ವದಂತಿ ಕೂಡಾ ಇತ್ತು. ಲೈಲಾ ಖಾನ್ 2008 ರಲ್ಲಿ ವಾಫಾ-ಎ ಡೆಡ್ಲಿ ಲವ್ ಸ್ಟೋರಿಯಲ್ಲಿ ನಟಿಸಿದ್ದರು. ಕೊಲೆಯ ಮೊದಲು, ಅವರು ಜಿನ್ನಾತ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ, ಲೈಲಾಳ ಮಲತಂದೆ ನಾದಿರ್ ಪಟೇಲ್ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅವರು ಆಸಿಫ್ ಶೇಖ್ ಮತ್ತು ಪರ್ವೇಜ್ ತಕ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.