ಕರ್ನಾಟಕ

karnataka

ಜನಸಂಖ್ಯೆ ಮೇಲೆಯೇ ಪರಿಣಾಮ ಬೀರಲಿದೆಯಾ ಮಂಕಿಪಾಕ್ಸ್?​: ಆತಂಕ ಮೂಡಿಸಿದ ಲ್ಯಾನ್ಸೆಂಟ್​ ವರದಿ - Mpox Outbreak

By ETV Bharat Karnataka Team

Published : Aug 25, 2024, 4:25 PM IST

ಮಂಕಿಪಾಕ್ಸ್​ ಕಾಯಿಲೆಯು ಕೊರೊನಾದಂತೆ ವಿಶ್ವಕ್ಕೆ ಭಾರೀ ಆತಂಕ ಮೂಡಿಸಿದೆ. ಇದು ವಿಶ್ವದ ಜನಸಂಖ್ಯೆಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಂಟ್​ ವರದಿ ತಿಳಿಸಿದೆ.

ಮಂಕಿಪಾಕ್ಸ್
ಮಂಕಿಪಾಕ್ಸ್ (ಪ್ರಾತಿನಿಧಿಕ ಚಿತ್ರ)

ನವದೆಹಲಿ:ವಿಶ್ವವನ್ನೇ ನಡುಗಿಸಿದ್ದ ಕೊರೊನಾ ಸೋಂಕು ಮಾದರಿಯಲ್ಲಿ ಮಂಕಿಪಾಕ್ಸ್​ ಕಾಯಿಲೆಯೂ ಭೀತಿ ಹುಟ್ಟಿಸಿದೆ. ಇದರ ಹರಡುವಿಕೆ ವೇಗವೂ ಹೆಚ್ಚಾಗಿದೆ. ಆಫ್ರಿಕಾ ದೇಶದ ಕಾಂಗೋ ಇದರ ಮೂಲವಾಗಿದ್ದರೂ, ಇದೀಗ ರೋಗ ವಿಶ್ವವ್ಯಾಪಿಯಾಗುತ್ತಿದೆ ಎಂದು ಲ್ಯಾನ್ಸೆಂಟ್​ ವರದಿ ಹೇಳಿದೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್​​ಒ) ಮಂಕಿಪಾಕ್ಸ್​​ ಬಾಧೆಯಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರಿಂದ ಎಲ್ಲ ರಾಷ್ಟ್ರಗಳು ಬಾಧಿತರ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಕೊರೊನಾ ಹೊಡೆತದಿಂದ ನಲುಗಿದ ಬೆನ್ನಲ್ಲೇ, ಇನ್ನೊಂದು ಭೀಕರ ಮಾರಿ ದೇಶಗಳನ್ನು ಅಲ್ಲಾಡಿಸಿದೆ. ಹೀಗಾಗಿ, ಆಯಾ ಸರ್ಕಾರಗಳು ಎಂಪಾಕ್ಸ್​ ಕಾಯಿಲೆ ಪತ್ತೆಗೆ ಕಟ್ಟೆಚ್ಚರ ವಹಿಸಿವೆ.

ಭೀತಿ ಹುಟ್ಟಿಸಿದ ಕ್ಲಾಡ್​​ 1ಬಿ:ಮಂಕಿಪಾಕ್ಸ್​ ಕಾಯಿಲೆ ವ್ಯಾಪಕವಾಗಿ ಹರಡಲು ಕ್ಲಾಡ್​​ 1ಬಿ ವೈರಸ್​ ಕಾರಣವಾಗಿದೆ. ಇದು ಅತಿ ಬಲಿಷ್ಠ ವೈರಸ್​​ ಆಗಿದ್ದು, ಮಾನವನ ದೇಹ ಸೇರಿದ ಬಳಿಕ ಸಾವಿನ ಪ್ರಮಾಣ ಶೇಕಡಾ 60 ರಷ್ಟು ಖಚಿತವಾಗಿರುತ್ತದೆ. ಈ ರೋಗಕ್ಕೆ ನಿಖರವಾದ ಲಸಿಕೆ, ಸಮರ್ಪಕ ಪರೀಕ್ಷೆ ವಿಧಾನ ಇಲ್ಲದ ಕಾರಣ ವೈರಸ್​ ಪತ್ತೆ ಕಷ್ಟವಾಗಿದೆ. ಇದರಿಂದ ಆರೋಗ್ಯ ಕ್ಷೇತ್ರಕ್ಕೆ ಈ ವೈರಸ್​ ಭಾರೀ ಸವಾಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಆಗಸ್ಟ್ 14 ರಂದು ಮಂಕಿಪಾಕ್ಸ್​ ಕುರಿತು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಘೋಷಿಸಿದೆ.

ಆಫ್ರಿಕಾ ಆರೋಗ್ಯ ಇಲಾಖೆ ನೀಡಿದ ವರದಿಯ ಪ್ರಕಾರ, ಈ ವರ್ಷದ ಆರಂಭದಿಂದ 12 ಆಫ್ರಿಕನ್ ದೇಶಗಳಲ್ಲಿ 18,737 ಮಂಕಿಪಾಕ್ಸ್​​ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 3,101 ಅಧಿಕೃತವಾಗಿ ದೃಢಪಟ್ಟಿದ್ದರೆ, 15,636 ಶಂಕಿತ ಪ್ರಕರಣಗಳಾಗಿವೆ. ಈ ಪೈಕಿ 541 ಸಾವುಗಳು ಸಂಭವಿಸಿವೆ. ಕಳೆದ ವರ್ಷ ಅಂದರೆ 2023 ರಲ್ಲಿ ಈ ಏಳು ದೇಶಗಳಲ್ಲಿ 14,838 ಎಂಪಾಕ್ಸ್​ ಪ್ರಕರಣಗ ಕಂಡುಬಂದಿದ್ದರೆ, ಇದರಲ್ಲಿ 1,665 ದೃಢಪಟ್ಟಿದ್ದವು. 13,173 ಶಂಕಿತ ಕೇಸ್​ಗಳಾಗಿದ್ದವು. 738 ಸಾವು ದಾಖಲಿಸಿದ್ದವು.

ನೇರ ಸಂಪರ್ಕದಿಂದ ಹರಡುವ ವೈರಸ್​:ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ರೋಗ ಹರಡುತ್ತದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನೂ ಇದು ಕಾಡುತ್ತಿದೆ. ಸಲಿಂಗಕಾಮದಿಂದಲೂ ಇದು ವ್ಯಾಪಿಸುತ್ತದೆ. ಕಾಂಗೋದ ಎಲ್ಲಾ 26 ಪ್ರಾಂತ್ಯಗಳಲ್ಲಿ ಎಂಪಾಕ್ಸ್​ ಪ್ರಕರಣಗಳು ವರದಿಯಾಗಿವೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 66 ರಷ್ಟು ಮಕ್ಕಳಲ್ಲಿ ಇದು ಕಂಡುಬಂದಿದೆ. ಇದರಲ್ಲಿ ಶೇಕಡಾ 82 ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ.

ಭಾರತ, ನೆರೆಯ ರಾಷ್ಟ್ರಗಳ ಸ್ಥಿತಿ ಏನು?:ದೇಶದಲ್ಲಿ ಈವರೆಗೂ ಯಾವುದೇ ಅಧಿಕೃತ ಮಂಕಿಪಾಕ್ಸ್​ ಕಾಯಿಲೆಯು ಯಾರಲ್ಲೂ ಕಂಡುಬಂದಿಲ್ಲ. ವಿಮಾನ ನಿಲ್ದಾಣಗಳು, ಅಂತಾರಾಷ್ಟ್ರೀಯ ಸಂಪರ್ಕಗಳ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಪ್ರತ್ಯೇಕ ಆಸ್ಪತ್ರೆಗಳನ್ನೂ ಸಿದ್ಧವಾಗಿಡಲೂ ಆದೇಶಿಸಲಾಗಿದೆ.

ಆತಂಕದ ವಿಚಾರವೆಂದರೆ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮಂಕಿಪಾಕ್ಸ್​ ಕಾಯಿಲೆ ಕಾಣಿಸಿಕೊಂಡಿದೆ. ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಆ ದೇಶದಿಂದ ಬರುವ ಮತ್ತು ಹೋಗುವ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದೆ. ಎರಡೂ ರಾಷ್ಟ್ರಗಳು ಭಾರತದೊಂದಿಗೆ ಗಡಿ ಹಂಚಿಕೊಂಡ ಕಾರಣ ಹೆಚ್ಚಿನ ನಿಗಾ ವಹಿಸಬೇಕಿದೆ.

ಇದನ್ನೂ ಓದಿ:ಭಾರತದಲ್ಲಿ ಶಂಕಾಸ್ಪದ ಮಂಕಿಪಾಕ್ಸ್​ ಪ್ರಕರಣ ಪತ್ತೆ; ದೆಹಲಿ ಏಮ್ಸ್‌ನಲ್ಲಿ ರೋಗಿಗೆ ಚಿಕಿತ್ಸೆ - Monkeypox In India

ABOUT THE AUTHOR

...view details