ಕರ್ನಾಟಕ

karnataka

ETV Bharat / bharat

ಮಂಕಿಪಾಕ್ಸ್​ ಆತಂಕ: ದೆಹಲಿಯಲ್ಲಿ ಐಸೋಲೇಷನ್​ ವಾರ್ಡ್​, ನೋಡಲ್​ ಆಸ್ಪತ್ರೆ ತೆರೆಯಲು ಕೇಂದ್ರ ಸೂಚನೆ - India Monkeypox Status - INDIA MONKEYPOX STATUS

ಮಂಕಿಪಾಕ್ಸ್​ ರೋಗ ವಿಶ್ವದೆಲ್ಲೆಡೆ ದಿಗಿಲು ಮೂಡಿಸುತ್ತಿದೆ. ಇದನ್ನು ತಡೆಯಲು ಆಯಾ ಸರ್ಕಾರಗಳು ಎಚ್ಚರಿಕೆ ವಹಿಸುತ್ತಿವೆ. ಭಾರತ ಸರ್ಕಾರವೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕ್ರಮಕ್ಕೆ ಮುಂದಾಗಿದೆ.

ಮಂಕಿಪಾಕ್ಸ್
ಮಂಕಿಪಾಕ್ಸ್ (ANI)

By ETV Bharat Karnataka Team

Published : Aug 19, 2024, 10:41 PM IST

ನವದೆಹಲಿ:ವಿಶ್ವದ ಹಲವು ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸುತ್ತಿರುವ ಮಂಗನ ಕಾಯಿಲೆಗೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರವೂ ಮುಂಜಾಗ್ರತೆ ಕ್ರಮ ವಹಿಸಲು ಮುಂದಾಗಿದೆ.

ಮೈಮೇಲೆ ದದ್ದು ಹೊಂದಿರುವ ರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸುವಂತೆ ಆರೋಗ್ಯ ಸಚಿವಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಮಂಕಿ ಫಾಕ್ಸ್​ ರೋಗ ಕಂಡುಬಂದಲ್ಲಿ ಅಂಥವರಿಗೆ ಚಿಕಿತ್ಸೆ ನೀಡಲು ದೆಹಲಿಯಲ್ಲಿ ಮೂರು ನೋಡಲ್ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಲ್ಲಿ ಶಂಕಿತರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನೂ ನಡೆಸಬೇಕು ಎಂದು ಸಚಿವಾಲಯ ನಿರ್ದೇಶಿಸಿದೆ.

ಈ ವರ್ಷ ಆಫ್ರಿಕಾದಲ್ಲಿ 18 ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ನೆರೆಯ ಪಾಕಿಸ್ತಾನದಲ್ಲೂ ಮಂಗನ ಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಮಂಕಿಪಾಕ್ಸ್ ಪ್ರಕರಣಗಳ ಸಾವಿನ ಪ್ರಮಾಣವು ಶೇಕಡಾ 1ರಿಂದ 10ರಷ್ಟು ಇದೆ.

ಮಂಗನ ಕಾಯಿಲೆಯ ಲಕ್ಷಣಗಳಿವು:

  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ ವೈರಸ್ ಮಾನವ ದೇಹವನ್ನು ಪ್ರವೇಶಿಸಿದ ನಂತರ 1 ರಿಂದ 21 ದಿನಗಳವರೆಗೆ ಯಾವುದೇ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
  • ಮೈಮೇಲೆ ಗುಳ್ಳೆಗಳು, ಜ್ವರ, ಗಂಟಲು ಒಣಗುವುದು, ತಲೆನೋವು, ಸ್ನಾಯು ನೋವು, ಬೆನ್ನು ನೋವು, ದೇಹದಲ್ಲಿ ಆಲಸ್ಯ ಇರುತ್ತದೆ.
  • ಇಂತಹ ಲಕ್ಷಣಗಳು ಸುಮಾರು 2 ರಿಂದ 4 ವಾರಗಳವರೆಗೆ ಇರುತ್ತದೆ. ಇದು ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ಆಧಾರವಾಗಿರುತ್ತದೆ. ಕೆಲವರಿಗೆ ಬಾಯಿ, ಕಣ್ಣು, ಗಂಟಲು ಮತ್ತು ಖಾಸಗಿ ಭಾಗಗಳಲ್ಲಿ ಗುಳ್ಳೆಗಳು ಬರಬಹುದು.

ರೋಗವನ್ನು ತಪ್ಪಿಸುವುದು ಹೇಗೆ?

  • ಮಂಕಿಪಾಕ್ಸ್‌ನಂತೆ ಕಾಣುವ ದದ್ದು ಹೊಂದಿರುವ ಜನರ ಸಂಪರ್ಕ ಹೊಂದಬೇಡಿ
  • ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯ ಸಂಪರ್ಕಕ್ಕೆ ಬಂದಲ್ಲಿ ಧರಿಸಿದ ಬಟ್ಟೆಗಳು, ಹೊದಿಕೆಗಳು ಅಥವಾ ಇತರ ವಸ್ತುಗಳನ್ನು ಮುಟ್ಟಬೇಡಿ.
  • ಜೊತೆಗೆ, ಕೈಗಳನ್ನು ಸಾಬೂನಿನಿಂದ ನಿಯಮಿತವಾಗಿ ತೊಳೆಯಬೇಕು.
  • ನಿಮ್ಮ ಕೈಗಳನ್ನು ತೊಳೆಯಲು ಆಲ್ಕೋಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಜರ್​ಗಳನ್ನು ಬಳಸಿ.
  • ರೋಗದಿಂದ ಬಚಾವಾಗಲು ಮುಖ್ಯವಾಗಿ ಅದರ ಲಕ್ಷಣಗಳನ್ನು ತಿಳಿದುಕೊಂಡು, ಜಾಗರೂಕರಾಗಿರಬೇಕು.

ಇದನ್ನೂ ಓದಿ:'ಎಂಪಾಕ್ಸ್‌' ರೋಗಕ್ಕೆ ಬೆಚ್ಚಿ ಬಿದ್ದ ಆಫ್ರಿಕಾ! ಲಕ್ಷಣಗಳೇನು? ನಿಯಂತ್ರಣ ಹೇಗೆ? ನೀವು ತಿಳಿದಿರಬೇಕಾದ ಮಾಹಿತಿ - Mpox Outbreak

ABOUT THE AUTHOR

...view details