ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ ಖಾಲಿಯಲ್ಲಿ ಈ ವರ್ಷದ ಆರಂಭದಲ್ಲಿ ಸ್ಥಳೀಯರು ಮತ್ತು ವಿಶೇಷವಾಗಿ ಮಹಿಳೆಯರು ನಡೆಸಿದ ಆಂದೋಲನದ ಹಿಂದೆ ಹಣ ಆಟವಾಡಿರಬಹುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಶಂಕೆ ವ್ಯಕ್ತಪಡಿಸಿದ್ದಾರೆ.
ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಹಜಹಾನ್ ಅವರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಮತ್ತು ಅಕ್ರಮ ಭೂ ಕಬಳಿಕೆ ವಿರುದ್ಧ ಸ್ಥಳೀಯರು ಆಂದೋಲನ ನಡೆಸಿದ್ದರು. ಸದ್ಯ ಈ ಬಗ್ಗೆ ಸಿಎಂ ಮಮತಾ ಮಾತನಾಡಿದ್ದಾರೆ.
ಜಿಲ್ಲೆಯ ಕರಾವಳಿಯ ದ್ವೀಪಗಳ ಸಂಗಮವಾದ ಸಂದೇಶ್ ಖಾಲಿಯಲ್ಲಿ ಸ್ಥಳೀಯರ ಆಂದೋಲನದ ನಂತರ ಇದೇ ಮೊದಲ ಬಾರಿಗೆ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತಾ, ನೇರವಾಗಿ ಪ್ರತಿಭಟನೆಗಳ ಬಗ್ಗೆ ಉಲ್ಲೇಖಿಸದಿದ್ದರೂ ಪರೋಕ್ಷವಾಗಿ ಈ ಬಗ್ಗೆ ಮಾತನಾಡಿದರು.
"ಸಂದೇಶ್ ಖಾಲಿಯಲ್ಲಿ ಹಣದ ಆಟ ನಡೆದಿದೆ, ಜನರನ್ನು ದಾರಿ ತಪ್ಪಿಸಲಾಗಿದೆ. ಆದರೆ ಸುಳ್ಳುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ನಾನು ವಿನಂತಿಸುತ್ತೇನೆ. ದುಷ್ಟ ಜನರ ಬಲೆಗೆ ಬೀಳಬೇಡಿ. ಯಾರಾದರೂ ನಿಮ್ಮನ್ನು ಮೋಸ ಮಾಡಲು ಯತ್ನಿಸಿದರೆ ಪ್ರತಿಭಟಿಸಿ ಎಂದು ಮಹಿಳೆಯರಿಗೆ ನಾನು ವಿನಂತಿಸುತ್ತೇನೆ" ಎಂದು ಮುಖ್ಯಮಂತ್ರಿ ಹೇಳಿದರು.