ಭುವನೇಶ್ವರ್(ಒಡಿಶಾ):ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಸುದೀರ್ಘ ಅಧಿಕಾರವನ್ನು ಅಂತ್ಯಗೊಳಿಸಿ ಮೊಟ್ಟ ಮೊದಲ ಬಾರಿಗೆ ಒಡಿಶಾದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಅವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯಪಾಲ ರಘುಬರ್ ದಾಸ್ ಅವರು ನೂತನ ಸಿಎಂ ಜೊತೆಗೆ ಇಬ್ಬರು ಡಿಸಿಎಂಗಳಾದ ಕನಕ್ ವರ್ಧನ್ ಸಿಂಗ್ ದೇವ್, ಪ್ರವತಿ ಪರಿದಾ ಮತ್ತು ನಾಲ್ವರು ಸಚಿವರಾದ ಪೃಥ್ವಿರಾಜ್ ಹರಿಚಂದನ್, ಮುಖೇಶ್ ಮಹಾಲಿಂಗ, ಬಿಭೂತಿ ಭೂಷಣ್ ಜೆನಾ, ಕೃಷ್ಣ ಚಂದ್ರ ಮೊಹಾಪಾತ್ರ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಝಿ ಅವರು ವೇದಿಕೆಗೆ ಬರುವ ಮುನ್ನ ಜನರ ಮಧ್ಯೆ ನಡೆದು ಬಂದು ಗಮನ ಸೆಳೆದರು. ನೆರೆದಿದ್ದ ಜನರು ಮಾಝಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಜೊತೆಗೆ ಹಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಒಡಿಶಾ ಅಸ್ಮಿತೆ ರಕ್ಷಿಸುವುದು ಹೊಸ ಸರ್ಕಾರದ ಆದ್ಯತೆ: ಪದಗ್ರಹಣ ಬಳಿಕ ಮಾತನಾಡಿದ ಮೋಹನ್ ಚರಣ್ ಮಾಝಿ, ಬಿಜು ಜನತಾ ದಳದ (ಬಿಜೆಡಿ) 24 ವರ್ಷಗಳ ಅಧಿಕಾರ ಅಂತ್ಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಭಾರೀ ಬಹುಮತ ನೀಡಿ ಗೆಲ್ಲಿಸಿದ್ದೀರಿ. ಒಡಿಶಾದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುವೆ. ಒಡಿಶಾದ ಅಸ್ಮಿತೆಯನ್ನು ರಕ್ಷಿಸುವುದು ಹೊಸ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಮೋದಿ, ನವೀನ್ ಪಟ್ನಾಯಕ್ ಹಾಜರು:ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.
ಯಾರೀ ಮೋಹನ್ ಚರಣ್ ಮಾಝಿ?:ಸಂತಾಲಿ ಬುಡಕಟ್ಟಿಗೆ ಸೇರಿದ 52ರ ಪ್ರಾಯದ ಮೋಹನ್ ಚರಣ್ ಮಾಝಿ ಅವರು ಕಿಯೋಂಜಾರ್ ಜಿಲ್ಲೆಯವರು. 1997-2000 ವರೆಗೆ ಸರಪಂಚ್ ಆಗಿ ರಾಜಕೀಯ ಜೀವನ ಆರಂಭಿಸಿದರು. 2000 ನೇ ಇಸ್ವಿಯಲ್ಲಿ ಕಿಯೋಂಜಾರ್‌ನಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 2004 ರಲ್ಲಿ ಮರು ಆಯ್ಕೆಯಾದರು. 2005 ರಿಂದ 09 ರವರೆಗೆ ಅವರು ಬಿಜೆಡಿ- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯ ಸಚೇತಕರಾಗಿದ್ದರು. 2019 ರಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ಇತ್ತೀಚಿನ ಚುನಾವಣೆಯಲ್ಲಿ ಮಾಝಿ ಅವರು ಬಿಜೆಡಿಯ ಮಿನಾ ಮಾಝಿ ಅವರನ್ನು 11,577 ಮತಗಳಿಂದ ಸೋಲಿಸುವ ಮೂಲಕ ಸಿಎಂ ಆಗಿ ಆಯ್ಕೆಯಾದರು. ಚುನಾವಣೆಯಲ್ಲಿ ಬಿಜೆಪಿ 147 ಸ್ಥಾನಗಳಲ್ಲಿ 78 ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ:ಒಡಿಶಾದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರ್ಕಾರ: ಮಾಝಿ ಹೊಸ ಸಿಎಂ, ಇಬ್ಬರು ಡಿಸಿಎಂ - Odisha BJP Govt