ಕರ್ನಾಟಕ

karnataka

By ANI

Published : Jun 6, 2024, 4:45 PM IST

ETV Bharat / bharat

ಜೂನ್ 9ರಂದು ಮೋದಿ ಪದಗ್ರಹಣ ಸಾಧ್ಯತೆ: ಪಾಕ್​ ಬಿಟ್ಟು ನೆರೆದೇಶಗಳಿಗೆ ಆಹ್ವಾನ - Modi Oath Taking Ceremony

ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಜೂನ್​ 9ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್‌ ದೇಶದ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

Narendra Modi
ನರೇಂದ್ರ ಮೋದಿ (IANS)

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಜೂನ್​ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ, ಜೂನ್ 8ರಂದು ಪದಗ್ರಹಣ ನಡೆಯಲಿದೆ ಎಂದು ಹೇಳಲಾಗಿತ್ತು.

ಜೂನ್​ 4ರಂದು ಪ್ರಕಟವಾದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ​ಎನ್​ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಬುಧವಾರ ಮೈತ್ರಿಕೂಟದ ನಾಯಕರು ಸಭೆ ಸೇರಿ ಮೋದಿ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

ಈ ಮೊದಲು ಜೂನ್ 8ರಂದು ಹೊಸ ಸರ್ಕಾರ ಪ್ರಮಾಣ ವಚನ ನಡೆಯಲಿದೆ ಎನ್ನಲಾಗಿತ್ತು. ಇದೀಗ ಜೂನ್​ 9ರಂದು ಈ ಸಮಾರಂಭ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಸುದ್ದಿಸಂಸ್ಥೆ ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ:ಎನ್​ಡಿಎ ಸರ್ಕಾರ ರಚನೆ ಕಸರತ್ತು: ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ

ನೆರೆ ರಾಷ್ಟ್ರಗಳಿಗೆ ಆಹ್ವಾನ: ಪದಗ್ರಹಣ ಸಮಾರಂಭಕ್ಕೆ ನೆರೆ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್‌ ದೇಶದ ಪ್ರಮುಖ ನಾಯಕರು ಆಗಮಿಸುವ ನಿರೀಕ್ಷೆ ಇದೆ.

ಚುನಾವಣೆ ಗೆಲುವಿನ ಬಳಿಕ ಮೋದಿ ಅವರಿಗೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ವೇಳೆ, ಮೋದಿ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಅಲ್ಲಿನ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಎಂದು ವಿಕ್ರಮಸಿಂಘೆ ಕಚೇರಿಯ ಮಾಧ್ಯಮ ವಿಭಾಗ ತಿಳಿಸಿದೆ.

ಮತ್ತೊಂದೆಡೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೂ ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಇನ್ನುಳಿದಂತೆ, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಮೋದಿ ತಮ್ಮ ಪ್ರಮಾಣ ವಚನ ಸಮಾರಂಭದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ದೇಶಗಳ ನಾಯಕರು ಭಾಗವಹಿಸಿದ್ದರು. 2019ರಲ್ಲಿ ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿದಾಗ ಬಂಗಾಳ ಕೊಲ್ಲಿಯನ್ನು ಅವಲಂಬಿಸಿದ 'BIMSTEC' (ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್) ರಾಷ್ಟ್ರಗಳ ನಾಯಕರು ಆಗಮಿಸಿದ್ದರು.

ಇದನ್ನೂ ಓದಿ:ಮೋದಿ ರಾಜೀನಾಮೆ ಸಲ್ಲಿಕೆ; ಜೂ.8ಕ್ಕೆ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ?

ABOUT THE AUTHOR

...view details