ನವದೆಹಲಿ:ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಂಗಳಲ್ಲಿ ದಾಖಲಾದ ಮತಗಳ ಮೂಲಕ ತಾಳೆ ಮಾಡಬೇಕು ಎಂಬ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಮತಗಳ ಕ್ರಾಸ್ ವೆರಿಫಿಕೇಶನ್ ಕುರಿತ ಕೋರ್ಟ್ ತೀರ್ಪು ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟಕ್ಕೆ ಬಲವಾದ ಹಿನ್ನಡೆ ಎಂದು ಅವರು ಟೀಕಿಸಿದ್ದಾರೆ. ಬಿಹಾರದ ಅರಾರಿಯಾದಲ್ಲಿ ಇಂದು ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ನೀಡಿರುವ ಮೀಸಲಾತಿಯನ್ನು ಪ್ರತಿಪಕ್ಷಗಳು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್, ಆರ್‌ಜೆಡಿ ಅಧಿಕಾರದಲ್ಲಿದ್ದಾಗ, ಅವರು ಬೂತ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಬಡವರು, ಹಿಂದುಳಿದವರು ಮತ್ತು ದಲಿತರ ಮತಗಳನ್ನು ತೆಗೆದುಹಾಕುತ್ತಿದ್ದರು. ಇವಿಎಂ ಅಳವಡಿಕೆಯಿಂದಾಗಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಿಲ್ಲ. ಆದ್ದರಿಂದಲೇ 'ಇಂಡಿಯಾ' ಮೈತ್ರಿ ಪಕ್ಷಗಳು ಇವಿಎಂಗಳ ಮೇಲೆ ನಂಬಿಕೆಯಿಲ್ಲ ಎನ್ನುತ್ತಿವೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ವರ್ಗಾಯಿಸಲಾಗಿದೆ. ತನ್ನ ಮಿತ್ರಪಕ್ಷ ಈ ರೀತಿ ಮಾಡಿದರೆ ಬಿಹಾರದ ಆರ್‌ಜೆಡಿ ಒಂದು ಮಾತನ್ನೂ ಹೇಳಲಿಲ್ಲ. ಇದೀಗ ಬಿಹಾರ ಸೇರಿದಂತೆ ದೇಶದ ಇತರೆ ಭಾಗಗಳಲ್ಲೂ ಅಲ್ಪಸಂಖ್ಯಾತರಿಗೆ ಒಬಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿ ನೀಡಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ. ನಾನೂ ಸಹ ಒಬಿಸಿಗೆ ಸೇರಿದವ. ಹಾಗಾಗಿಯೇ ನನಗೆ ಹಿಂದುಳಿದ ವರ್ಗಗಳ ಕಷ್ಟಗಳು ಗೊತ್ತು ಎಂದರು.