ನವದೆಹಲಿ : 2024ರ ಲೋಕಸಭಾ ಚುನಾವಣೆಯ ಬಳಿಕ 100 ದಿನಗಳ ಕಾಲ ಜಾರಿಗೊಳಿಸಬೇಕಾದ ಯೋಜನೆಗಳೊಂದಿಗೆ ಭಾರತೀಯ ರೈಲ್ವೆ ಸಜ್ಜಾಗಿದೆ. 24 ಗಂಟೆಗಳ ಟಿಕೆಟ್ ಮರುಪಾವತಿ ಯೋಜನೆ, ವಿವಿಧ ರೈಲ್ವೆ ಸೌಲಭ್ಯಗಳಿಗಾಗಿ ಸಮಗ್ರ ಅಪ್ಲಿಕೇಶನ್, ಮೂರು ಆರ್ಥಿಕ ಕಾರಿಡಾರ್ಗಳು ಮತ್ತು ಸ್ಲೀಪರ್ ವಂದೇ ಭಾರತ್ ರೈಲುಗಳಂತಹ ವಿವಿಧ ಪ್ರಯಾಣಿಕ ಸ್ನೇಹಿ ಕ್ರಮಗಳ ಮೇಲೆ ಗಮನ ಹರಿಸುವುದನ್ನು ಈ ಯೋಜನೆಗಳು ಒಳಗೊಂಡಿವೆ ಎಂದು ಸರ್ಕಾರಿ ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ. ಹೊಸ ಟಿಕೆಟ್ ಮರುಪಾವತಿ ಯೋಜನೆಯಡಿ 24 ಗಂಟೆಗಳಲ್ಲಿ ಮರುಪಾವತಿ ಪಡೆಯಬಹುದಾಗಿದೆ. ಈಗ ಮರುಪಾವತಿಯು ಮೂರು ದಿನಗಳಿಂದ ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತಿದೆ.
ರೈಲ್ವೆ ಸಮಗ್ರವಾದ 'ಸೂಪರ್ ಆ್ಯಪ್' ಒಂದನ್ನು ಪ್ರಾರಂಭಿಸಲಿದ್ದು, ಇದು ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರದ್ದುಗೊಳಿಸುವುದರಿಂದ ಹಿಡಿದು ರೈಲುಗಳ ಲೈವ್ ಟ್ರ್ಯಾಕಿಂಗ್ ಮತ್ತು ರೈಲುಗಳಲ್ಲಿ ಆಹಾರ ಬುಕಿಂಗ್ ಮಾಡುವವರೆಗೆ ರೈಲ್ವೆಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ರೈಲ್ವೆಗಾಗಿ ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿಯಲ್ಲಿ ಎಲ್ಲ ರೈಲು ಪ್ರಯಾಣಿಕರಿಗೆ "ಪಿಎಂ ರೈಲ್ ಯಾತ್ರಿ ಬಿಮಾ ಯೋಜನೆ" ಎಂಬ ವಿಮಾ ಯೋಜನೆಯೂ ಸೇರಿದೆ.
ರೈಲ್ವೆಯ ಆಧುನೀಕರಣ ಯೋಜನೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ರೈಲ್ವೆಯನ್ನು ಆಧುನಿಕ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಪರಿವರ್ತಿಸಲು 10 ರಿಂದ 12 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು. ಭಾರತದಾದ್ಯಂತ ಮೂರು ವಿಭಾಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. 100 ಕಿ.ಮೀ.ಗಿಂತ ಕಡಿಮೆ ಮಾರ್ಗಗಳಲ್ಲಿ ವಂದೇ ಮೆಟ್ರೋ, 100 ರಿಂದ 550 ಕಿ.ಮೀ ಮಾರ್ಗಗಳಲ್ಲಿ ವಂದೇ ಚೇರ್ ಕಾರ್ ಮತ್ತು 550 ಕಿ.ಮೀ. ಗಿಂತ ಹೆಚ್ಚಿನ ಮಾರ್ಗಗಳಲ್ಲಿ ವಂದೇ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುವುದು. ಪ್ರಸ್ತುತ, ವಂದೇ ಭಾರತ್ ರೈಲುಗಳು ಭಾರತದಾದ್ಯಂತ ಸುಮಾರು 50 ಮಾರ್ಗಗಳಲ್ಲಿ ಚಲಿಸುತ್ತಿವೆ.