ಹೈದರಾಬಾದ್ ಮೆಟ್ರೋ ನಿಲ್ದಾಣದಲ್ಲಿ ಬೆಂಗಳೂರಿನ ಬಾಲಕ ಪತ್ತೆ; ಪೊಲೀಸರು ಹೇಳಿದ್ದೇನು? ಬೆಂಗಳೂರು: ಭಾನುವಾರ ಬೆಂಗಳೂರಿನಿಂದ ಕಾಣೆಯಾಗಿದ್ದ 12 ವರ್ಷದ ಪರಿಣವ್ ಎಂಬ ಬಾಲಕ ಸಾಮಾಜಿಕ ಜಾಲತಾಣಗಳ ನೆರವಿನಿಂದ ಮಂಗಳವಾರ ರಾತ್ರಿ ಹೈದರಾಬಾದ್‌ನ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬೆಂಗಳೂರಿನ ದೀನ್ಸ್ ಅಕಾಡೆಮಿಯಲ್ಲಿ 6ನೇ ತರಗತಿ ಓದುತ್ತಿರುವ ಬಾಲಕ ಭಾನುವಾರ ಬೆಳಿಗ್ಗೆ ವೈಟ್ಪೀಲ್ಡ್ನ ಕೋಚಿಂಗ್ ಸೆಂಟರ್ಗೆ ತೆರಳಿದ್ದ. ತರಗತಿ ಮುಗಿದ ನಂತರ ಮನೆಗೆ ಹೋಗದೆ ಕಾಣೆಯಾಗಿದ್ದ. ಮಧ್ಯಾಹ್ನ 3 ಗಂಟೆಗೆ ಯಮಲೂರು ಬಳಿಯ ಪೆಟ್ರೋಲ್ ಪಂಪ್ನಲ್ಲಿ ಕಾಣಿಸಿಕೊಂಡಿದ್ದ. ಈ ಕುರಿತ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಪತ್ತೆಗೆ ಬೆಂಗಳೂರು ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಇದೇ ಹೊತ್ತಿಗೆ ಮಾಹಿತಿ ನೀಡುವಂತೆ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಪೋಸ್ಟ್ಗಳನ್ನೂ ಶೇರ್ ಮಾಡಲಾಗಿತ್ತು.
ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸದ್ಯ ಹೈದರಾಬಾದ್ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು, ಬಾಲಕ ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಗಮನಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಬಾಲಕನನ್ನು ಕಂಡ ಅವರು ತಕ್ಷಣವೇ ಬಾಲಕನ ಕುಟುಂಬ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಹೈದರಾಬಾದ್ಗೆ ಧಾವಿಸಿದ್ದಾರೆ.
ಬಾಲಕ ಪರಿಣವ್ ಕುಟುಂಬ ಆಂಧ್ರಪ್ರದೇಶದ ನೆಲ್ಲೂರು ಮೂಲದವರಾಗಿದ್ದು, ಬೆಂಗಳೂರಿನ ವೈಟ್ಫೀಲ್ಡ್ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಮಗ ಕಾಣೆಯಾದ ಕೂಡಲೇ ಪೊಲೀಸರಿಗೆ ದೂರು ನೀಡಿದ್ದ ತಾಯಿ, ಹುಡುಕಿ ಕೊಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮಗನನ್ನು ಹುಡುಕಲು ಸಹಾಯ ಮಾಡಿದವರಿಗೆ ವಿಡಿಯೋ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಪೊಲೀಸ್ ಅಧಿಕಾರಿ ಹೇಳಿದ್ದೇನು?:ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೆಟ್ರೋ ನಿಲ್ದಾಣದ ಅಧಿಕಾರಿಗಳು ಬಾಲಕನಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಂತೆಯೇ, ಮೆಟ್ರೋ ನಿಲ್ದಾಣಕ್ಕೆ ತೆರಳಿ ಬಾಲಕನನ್ನು ವಿಚಾರಣೆ ನಡೆಸಲಾಗಿದೆ. ಆಗ ಜನವರಿ 21ರಂದು ಬೆಂಗಳೂರಿನಿಂದ ಬಾಲಕ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಬಾಲಕ ಅಪ್ರಾಪ್ತನಾಗಿರುವ ಕಾರಣಕ್ಕೆ ಪೋಷಕರು ನೀಡಿದ ದೂರಿನ ಮೇರೆಗೆ ವೈಟ್ಫೀಲ್ಡ್ ಠಾಣೆಯಲ್ಲಿ ಅಪಹರಣದ ಶಂಕೆ ಮೇಲೆ ಎಫ್ಐಆರ್ ದಾಖಲಾಗಿತ್ತು. ಬಾಲಕನ ರಕ್ಷಣೆ ಬಳಿಕ ಪೋಷಕರು ಮತ್ತು ಸಂಬಂಧಪಟ್ಟ ಬೆಂಗಳೂರಿನ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಅಲ್ಲದೇ, ಹೈದರಾಬಾದ್ನಲ್ಲಿ ಬಾಲಕನ ಮಾವಯೊಬ್ಬರು ನೆಲೆಸಿದ್ದಾರೆ. ಈ ವಿಷಯ ತಿಳಿದು ಅವರೂ ಸಹ ನಮ್ಮನ್ನು ಸಂರ್ಪಕಿಸಿದ್ದರು. ಬಾಲಕನನ್ನು ಗುರುತಿಸಿ ಕಾರಣಕ್ಕೆ ಅವರಿಗೆ ಆತನನ್ನು ಒಪ್ಪಿಸಲಾಗಿದೆ ಎಂದು ಹೈದರಾಬಾದ್‌ನ ನಾಂಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿ ಅಭಿಲಾಷ್ ವಿವರಿಸಿದ್ದಾರೆ.
ಇದನ್ನೂ ಓದಿ:ಋಷಿಕೇಶ್ನಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಅರಣ್ಯಾಧಿಕಾರಿಗಳು ಸಾವು, ಮಹಿಳಾ ಸಿಬ್ಬಂದಿ ನಾಪತ್ತೆ