ಇಂಫಾಲ್,ಮಣಿಪುರ: ಜಿರಿಬಾಮ್ ಜಿಲ್ಲೆಯಲ್ಲಿ ನ.11ರಂದು ಅಪಹರಿಸಲ್ಪಟ್ಟ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಬಿಡುಗಡೆ ಮಾಡುವಂತೆ ಮಣಿಪುರ ಬಿಜೆಪಿ ಮುಖ್ಯಸ್ಥೆ ಅಧಿಕಾರಿ ಮಯೂಮ್ ಶಾರದಾ ದೇವಿ ಗುರುವಾರ ಉಗ್ರರಿಗೆ ಒತ್ತಾಯಿಸಿದ್ದಾರೆ.
ಜಕುರಾಧೋರ್ ಪ್ರದೇಶದ ಒಂದೇ ಕುಟುಂಬದ ಆರು ಸದಸ್ಯರನ್ನು ಅಪಹರಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ ಬಿಜೆಪಿ ನಾಯಕಿ, ಮಾನವೀಯ ನೆಲೆಯಲ್ಲಿ ಮುಗ್ಧ ಗ್ರಾಮಸ್ಥರನ್ನು ಯಾವುದೇ ಹಾನಿಯಿಲ್ಲದೇ ಬಿಡುಗಡೆ ಮಾಡುವಂತೆ ಉಗ್ರಗಾಮಿಗಳಿಗೆ ಆಗ್ರಹಿಸಿದರು.
"ಮಕ್ಕಳು ಮತ್ತು ಮಹಿಳೆಯರನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಬಿಜೆಪಿ ವತಿಯಿಂದ ನಾವು ಅವರಿಗೆ (ಉಗ್ರಗಾಮಿಗಳಿಗೆ) ಮನವಿ ಮಾಡುತ್ತೇವೆ" ಎಂದು ಶಾರದಾ ದೇವಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಹಿಂಸಾಚಾರ ಖಂಡಿಸಿದ ಶಾರದಾ ದೇವಿ:ಉಗ್ರಗಾಮಿಗಳು ಮುಗ್ಧ ಜನರ ವಿರುದ್ಧ ನಡೆಸುತ್ತಿರುವ ಹಿಂಸಾಚಾರವನ್ನು ಬಲವಾಗಿ ಖಂಡಿಸಿದ ಅವರು, ಇತ್ತೀಚೆಗೆ ಹಿಂಸಾಚಾರ ಉಲ್ಬಣವಾಗಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ ಮತ್ತು ಇದು ಸರ್ಕಾರ ಕೈಗೊಂಡ ಶಾಂತಿ ಪ್ರಕ್ರಿಯೆಗಳಿಗೆ ಭಂಗ ತಂದಿದೆ ಎಂದು ಹೇಳಿದರು.
ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರೊಂದಿಗಿನ ಭೇಟಿಯನ್ನು ಉಲ್ಲೇಖಿಸಿದ ಶಾರದಾ ದೇವಿ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಒತ್ತೆಯಾಳುಗಳನ್ನು ರಕ್ಷಿಸುವಂತೆ ರಾಜ್ಯಪಾಲರು ಭದ್ರತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಮಕ್ಕಳು ಮತ್ತು ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್, ಇತರ ಕಾಂಗ್ರೆಸ್ ಮುಖಂಡರು ಮತ್ತು ಮಣಿಪುರದ ಪಕ್ಷದ ಲೋಕಸಭಾ ಸದಸ್ಯ ಅಂಗೊಮ್ಚಾ ಬಿಮೋಲ್ ಅಕೋಯಿಜಾಮ್ ಕೂಡ ಉಗ್ರರಿಗೆ ಪ್ರತ್ಯೇಕವಾಗಿ ಒತ್ತಾಯಿಸಿದ್ದಾರೆ. ಮುಗ್ಧ ಜನರನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಿಂಗ್ ನೇತೃತ್ವದ ಕಾಂಗ್ರೆಸ್ ನ ಐದು ಸದಸ್ಯರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಅಪಹರಣಕ್ಕೊಳಗಾದ ಜನರನ್ನು ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸುವಂತೆ ವಿನಂತಿಸಿತು.
ಮೈಥೇಯಿ ಸಮುದಾಯಕ್ಕೆ ಸೇರಿದ ಆರು ಜನರ ಅಪಹರಣವನ್ನು ಖಂಡಿಸಿ ಒಟ್ಟು 13 ನಾಗರಿಕ ಸಮಾಜ ಸಂಘಟನೆಗಳು ಮಂಗಳವಾರ ಮತ್ತು ಬುಧವಾರ ಕಣಿವೆ ಪ್ರದೇಶಗಳಲ್ಲಿ 24 ಗಂಟೆಗಳ ಸಂಪೂರ್ಣ ಬಂದ್ ಆಚರಿಸಿದವು. ರಾಜ್ಯ ಮತ್ತು ಕೇಂದ್ರ ಪಡೆಗಳ ನಿರ್ಲಕ್ಷ್ಯವೇ ಅಪಹರಣಕ್ಕೆ ಕಾರಣ ಎಂದು ಆರೋಪಿಸಿದ ಮೈಥೇಯಿ ಸಮುದಾಯದ ಅತ್ಯುನ್ನತ ಸಂಸ್ಥೆಯಾದ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (ಕೊಕೊಮಿ) ಪತ್ತೆಯಾಗದ ಆರು ಜನರನ್ನು ತಕ್ಷಣ ರಕ್ಷಿಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಗೆ ದೊರೆತ ವಿವಿಧ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿವು