ಕರ್ನಾಟಕ

karnataka

ETV Bharat / bharat

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ​ ಎನ್​ಐಎಗೆ ಹಸ್ತಾಂತರ: ತನಿಖೆ ಆರಂಭ

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್‌ಐಎಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಮೇಶ್ವರಂ ಕೆಫೆ ಸ್ಫೋಟ ಕೇಸ್​
ರಾಮೇಶ್ವರಂ ಕೆಫೆ ಸ್ಫೋಟ ಕೇಸ್​

By ANI

Published : Mar 4, 2024, 10:47 AM IST

Updated : Mar 4, 2024, 3:09 PM IST

ನವದೆಹಲಿ:ತೀವ್ರ ಆತಂಕ ಮೂಡಿಸಿರುವ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್​ಐಎ) ವಹಿಸಿದೆ ಎಂದು ಮೂಲಗಳಿಂದು ತಿಳಿದುಬಂದಿದೆ.

ಕೆಫೆ ಸ್ಫೋಟದಲ್ಲಿ ಆರೋಪಿಯ ಮುಖ ಚಹರೆ ಪತ್ತೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ತಲೆಮರೆಸಿಕೊಂಡಿರುವ ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿತ್ತು. ಆದರೆ, ಪ್ರಕರಣ ಸೂಕ್ಷ್ಮತೆ ಪಡೆದ ಹಿನ್ನೆಲೆಯಲ್ಲಿ ತ್ವರಿತ ತನಿಖೆಗಾಗಿ ಗೃಹ ಸಚಿವಾಲಯ ಎನ್​ಐಎಯನ್ನು ಅಖಾಡಕ್ಕಿಳಿಸಿದೆ.

ಇದಕ್ಕೂ ಮೊದಲು ಎನ್‌ಐಎ ತಂಡ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಭಯೋತ್ಪಾದನೆ ದೃಷ್ಟಿಕೋನದಿಂದಲೂ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಸಿಸಿಬಿ ಪೊಲೀಸರು ನಡೆಸಿದ ಈವರೆಗಿನ ತನಿಖೆಯ ಮಾಹಿತಿಯನ್ನು ಪಡೆದಿರುವ ಎನ್ಐಎ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಳ್ಳಲು‌ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ‌ ಲಭ್ಯವಾಗಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ಪ್ರಕರಣದ ಕಡತಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಇಂದು ಅಥವಾ ನಾಳೆ ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ:ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರೀ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಸುಧಾರಿತ ಕಡಿಮೆ ತೀವ್ರತೆಯ ಬಾಂಬ್​ ಇದಾಗಿದ್ದರಿಂದ ದೊಡ್ಡ ಹಾನಿ ಸಂಭವಿಸಿರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಬ್ಯಾಗ್ ಸಮೇತ ಕೆಫೆಗೆ ಆಗಮಿಸಿ, ಬಳಿಕ ಒಬ್ಬನೇ ತೆರಳುತ್ತಿರುವುದು ಪತ್ತೆಯಾಗಿದೆ. ಈತನ ಚಹರೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್​ ಅವರು ಶಂಕಿತ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು. 8 ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕಿನಿಂದ ಸಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಭಯೋತ್ಪಾದನೆ ಸೇರಿ ಹಲವು ಕೋನಗಳಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದು ತಿಳಿದುಬಂದಿಲ್ಲ. ತಾಂತ್ರಿಕವಾಗಿ ಅಂಥದ್ದೇ ವಸ್ತು ಮತ್ತು ವ್ಯವಸ್ಥೆಯನ್ನು ಬಳಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸ್ಫೋಟ ಪ್ರಕರಣವನ್ನು ಎನ್​ಐಎಗೆ ವಹಿಸುವ ಬಗ್ಗೆ ಅಗತ್ಯಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದರು. ಸದ್ಯ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ಸಿಕ್ಕಿಲ್ಲ ಎಂದಿದ್ದರು.

ಇದನ್ನೂ ಓದಿ:ಕೆಫೆ ಸ್ಫೋಟ: ಆರೋಪಿಯ ಮಾಹಿತಿ ಸಿಕ್ಕಿದೆ, ಆದಷ್ಟು ಬೇಗ ಬಂಧನ- ಗೃಹ ಸಚಿವ ಪರಮೇಶ್ವರ್

Last Updated : Mar 4, 2024, 3:09 PM IST

ABOUT THE AUTHOR

...view details