ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ಮೂರು ಸಾವಿರ ಹಣ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಚುನಾವಣೆ ಪ್ರಚಾರದ ವೇಳೆ ಅವರು ಈ ಭರವಸೆ ನೀಡಿದ್ದಾರೆ. ಇದು ಅಘಾಡಿ ಮೈತ್ರಿಕೂಟ ಪ್ರಕಟಿಸಿರುವ ಚುನಾವಣಾ ಭರವಸೆಯೂ ಆಗಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಸಂವಿಧಾನವನ್ನು ಓದದೇ ಇರುವವರಿಗೆ ಅದು ಖಾಲಿಯಂತೆ ಕಾಣುತ್ತದೆ ಎಂದು ಪ್ರಧಾನಿ ಮೋದಿ ಟೀಕೆಗೆ ತಿರುಗೇಟು ನೀಡಿದ್ದಾರೆ.
ಸಂವಿಧಾನವನ್ನು ಅವರು ಓದಿಲ್ಲ:ಬಿಜೆಪಿಗೆ ನಾನು ಹಿಡಿದಿರುವ ಪುಸ್ತಕದ ಬಣ್ಣದ ಬಗ್ಗೆ ಆಕ್ಷೇಪವಿದೆ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಓದಿಲ್ಲ. ಅವರು ಕೇವಲ ಅದರ ಬಣ್ಣವನ್ನು ಮಾತ್ರ ನೋಡಿದ್ದಾರೆ. ಆದರೆ, ನಾವು ಎಂತಹದ್ದೇ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆ ಮಾಡಿದ್ದೇವೆ. ಬಿಜೆಪಿಗೆ ನಾನು ಹಿಡಿದಿರುವ ಪುಸ್ತಕದ ಬಣ್ಣದ ಬಗ್ಗೆ ಆಕ್ಷೇಪವಿದೆ. ಆದರೆ, ನಾವು ಬಣ್ಣದ ಹೊರತಾಗಿ ಸಂವಿಧಾನವನ್ನು ರಕ್ಷಿಸಲು ಬದ್ಧರಾಗಿದ್ದೇವೆ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಹರಿಹಾಯ್ದರು.
ಪ್ರಧಾನಿ ಅವರಿಗೆ ಪುಸ್ತದೊಳಗೆ ಏನು ಬರೆದಿದ್ದಾರೆ ಎಂಬ ಯಾವುದೇ ಕಲ್ಪನೆ ಇಲ್ಲ. ಇದೇ ಕಾರಣಕ್ಕೆ ಖಾಲಿ ಪುಸ್ತಕ ಎಂದು ಟೀಕಿಸುತ್ತಿದ್ದಾರೆ. ಪುಸ್ತಕದ ಬಣ್ಣ ಯಾವುದಿದೆ ಎಂಬುದಕ್ಕಿಂತ ಅದರಲ್ಲಿ ಏನು ಬರೆದಿದೆ ಎಂಬುದನ್ನು ಮುಖ್ಯ. ಇದು ಪ್ರತಿನಿಧಿಸುವ ಅಂಶಗಳಿಗೆ ನಮ್ಮ ಜೀವ ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಹಿಂದುಳಿದವರ ಏಳಿಗೆಯೇ ಕಾಂಗ್ರೆಸ್ ಬದ್ಧತೆ:ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನಿರ್ಧಾರ ಕೈಗೊಳ್ಳುವಲ್ಲಿ ಪ್ರಾತಿನಿಧ್ಯ ಸಿಗಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಆದಿವಾಸಿಗಳು ಈ ದೇಶದ ಮೊದಲ ಮಾಲೀಕರು. ಜಲ, ಅರಣ್ಯ ಮತ್ತು ಭೂಮಿ ಮೇಲೆ ಅವರಿಗೆ ಮೊದಲ ಹಕ್ಕಿದೆ. ಆದರೆ, ಆದಿವಾಸಿಗಳಿಗೆ ಯಾವುದೇ ಹಕ್ಕಿಲ್ಲದೇ ಅವರು ಅರಣ್ಯದಲ್ಲಿಯೇ ಇರಬೇಕು ಎಂದು ಬಿಜೆಪಿ ಬಯಸುತ್ತದೆ. ಬಿರ್ಸಾ ಮುಂಡಾ ಇದಕ್ಕಾಗಿ ಹೋರಾಡಿ, ಜೀವನ ನೀಡಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿರುವ ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗದ ಜನರು ಎಷ್ಟಿದ್ದಾರೆ ಮತ್ತು ಸಂಪನ್ಮೂಲದಲ್ಲಿ ಅವರು ಪಾಲು ಎಷ್ಟಿದೆ ಎಂಬುದನ್ನು ತಿಳಿಯಲು ಜಾತಿ ಸಮೀಕ್ಷೆ ಸಹಾಯ ಮಾಡುತ್ತದೆ. ಶೇ 8ರಷ್ಟು ಇರುವ ಬುಡಕಟ್ಟು ಜನರಲ್ಲಿ ಕೇವಲ ಶೇ 1ರಷ್ಟು ಜನರು ಮಾತ್ರ ನಿರ್ಧಾರ ರೂಪಿಸುವಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
ಮಹಾರಾಷ್ಟ್ರಕ್ಕೆ ಬರಬೇಕಿದ್ದ ವಿವಿಧ ದೊಡ್ಡ ಮೊತ್ತದ ಯೋಜನೆಗಳನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಆದ ಪರಿಣಾಮ ರಾಜ್ಯದಲ್ಲಿ ಐದು ಲಕ್ಷ ಉದ್ಯೋಗಗಳನ್ನು ಕಿತ್ತುಕೊಳ್ಳಲಾಗಿದೆ. ಆದರೆ, ನಮ್ಮ ಸರ್ಕಾರ ಇದನ್ನು ಮಾಡುವುದಿಲ್ಲ. ಮಹಾರಾಷ್ಟ್ರಕ್ಕೆ ಸೇರಬೇಕಾದ ಯೋಜನೆ ಇಲ್ಲಿಯೇ ಸೃಷ್ಟಿಸ ಲಿದ್ದು, ಗುಜರಾತ್ನಲ್ಲಿರಬೇಕಾದ ಯೋಜನೆ ಅಲ್ಲಿಯೇ ಇರಲಿದೆ ಎಂದರು.
ಈ ಬಾರಿ ಮಹಾವಿಕಾಸ ಅಘಾಡಿ ಸರ್ಕಾರ ರಚನೆಯಾದರೆ, ಮಹಾಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಮಾಸಿಕ 3 ಸಾವಿರ ನೀಡಲಾಗುವುದು. ಮಹಿಳೆಯರಿಗೆ ಉಚಿತ ಬಸ್ ಸೇವೆ ಮತ್ತು ರೈತರ ಮೂರು ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದರು. ಸದ್ಯ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಲಡ್ಕಿ ಬಹಿನ್ ಯೋಜನೆ ಅಡಿ ಮಾಸಿಕ 1,500 ರೂ ನೀಡುತ್ತಿದೆ.
ಇದನ್ನೂ ಓದಿ: ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಮತದಾನ: ಕಾರಣಗಳಿವು