ನವದೆಹಲಿ: ಸಮಗ್ರ ಸಮಾಲೋಚನೆ ಮತ್ತು ಚರ್ಚೆ ನಡೆಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಸಮಿತಿಯ ಸದಸ್ಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ.
"ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಸಮಂಜಸ ಸಮಯದವರೆಗೆ ವಿಸ್ತರಿಸುವಂತೆ ವಿನಂತಿಸಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ" ಎಂದು ಸದಸ್ಯರು ಸ್ಪೀಕರ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಮಿತಿಯು ಈವರೆಗೆ ಸಾಧಿಸಿದ ಪ್ರಗತಿಯನ್ನು ಪತ್ರದಲ್ಲಿ ಎತ್ತಿ ತೋರಿಸಲಾಗಿದ್ದು, ಆಗಸ್ಟ್ 22, 2024 ರಂದು ನಡೆದ ಮೊದಲ ಸಭೆಯಿಂದ, ಜೆಪಿಸಿ ಈವರೆಗೆ ಕೇವಲ 25 ಸಭೆಗಳನ್ನು ನಡೆಸಿದೆ ಎಂದು ಉಲ್ಲೇಖಿಸಲಾಗಿದೆ.
"ಜೆಪಿಸಿ ಈವರೆಗೆ ಕೇವಲ 25 ಸಭೆಗಳನ್ನು ನಡೆಸಿದೆ. ಇದರಲ್ಲಿ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪುರಾವೆಗಳು / ಪ್ರಸ್ತುತಿಗಳು ಸೇರಿವೆ. ಆದರೆ ಬಿಹಾರ, ನವದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಇನ್ನೂ ಸಮಿತಿಯ ಮುಂದೆ ಹಾಜರಾಗಿಲ್ಲ. ಇದಲ್ಲದೆ, ವಿವಿಧ ಪ್ರಾತಿನಿಧಿಕ ಪಾಲುದಾರ ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಧ್ಯವಾಗುವಂತೆ ಸಮಿತಿಯ ಕಾಲಾವಧಿಯನ್ನು ಇನ್ನಷ್ಟು ವಿಸ್ತರಿಸುವಂತೆ ಕೋರುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.