ಶ್ರೀನಗರ:ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ (ಸೆಪ್ಟಂಬರ್ 29, 2024) ಒಂದು ದಿನ ತಮ್ಮ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಲೆಬನಾನ್ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯನ್ನು ಖಂಡಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
"ಲೆಬನಾನ್ ಮತ್ತು ಗಾಜಾದ ಹುತಾತ್ಮರಿಗೆ, ವಿಶೇಷವಾಗಿ ಹಸನ್ ನಸರುಲ್ಲಾ ಅವರಿಗೆ ಬೆಂಬಲವಾಗಿ ನಾಳೆ ನನ್ನ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದೇನೆ. ಅಪಾರ ದುಃಖ ಮತ್ತು ಪ್ರತಿರೋಧದ ಈ ಸಮಯದಲ್ಲಿ ನಾವು ಪ್ಯಾಲೆಸ್ಟೈನ್ ಮತ್ತು ಲೆಬನಾನ್ ಜನರ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಮುಫ್ತಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ನಸ್ರಲ್ಲಾ ಹತ್ಯೆಯನ್ನು ಖಂಡಿಸಿ ಶನಿವಾರ (ಸೆಪ್ಟಂಬರ್ 28, 2024) ಇಲ್ಲಿನ ಹಲವಾರು ಭಾಗಗಳಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆಗಳು ನಡೆದಿವೆ. ನಗರದ ಹಸನಾಬಾದ್, ರೈನಾವರಿ, ಸೈದಕಡಲ್, ಮೀರ್ ಬೆಹ್ರಿ ಮತ್ತು ಆಶೈಬಾಗ್ ಪ್ರದೇಶಗಳಲ್ಲಿ ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ಕಪ್ಪು ಬಾವುಟಗಳನ್ನು ಹಿಡಿದು ರಸ್ತೆಗಳಲ್ಲಿ ಜಮಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಬನಾನ್ ಮೂಲದ ಉಗ್ರಗಾಮಿ ಗುಂಪಿನ ಉನ್ನತ ನಾಯಕನ ಹತ್ಯೆಯನ್ನು ಖಂಡಿಸಿದ ಪ್ರತಿಭಟನಾಕಾರರು ಇಸ್ರೇಲ್ ಮತ್ತು ಯುಎಸ್ ವಿರೋಧಿ ಘೋಷಣೆಗಳನ್ನು ಕೂಗಿದರು.