ಗುವಾಹಟಿ(ಅಸ್ಸಾಂ): ಭಾ ಮಳೆಗೆ ಈಶಾನ್ಯ ರಾಜ್ಯಗಳು ತತ್ತರಿಸಿವೆ. ಮೇಘಾಲಯದಲ್ಲಿ ಒಂದೇ ತಿಂಗಳಲ್ಲಿ ಶೇ 44ರಷ್ಟು ಅಧಿಕ ಮಳೆಯಾಗಿದೆ. ಮೂಲಭೂತ ಸೌಕರ್ಯಗಳು ಮತ್ತು ಜನಜೀವನದ ಮೇಲೆ ತೀವ್ರತರ ಪರಿಣಾಮ ಉಂಟಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 1ರಿಂದ ಜುಲೈ 3ರವರೆಗೆ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಶೇ 44ರಷ್ಟು ಅಧಿಕ ಮಳೆ ಸುರಿದಿದೆ. ದಕ್ಷಿಣ ಜಿಲ್ಲೆಗಳು ಹೆಚ್ಚಿನ ಪರಿಣಾಮಕ್ಕೆ ತುತ್ತಾಗಿವೆ. ಸರ್ಕಾರ ಪರಿಸ್ಥಿತಿ ನಿರ್ವಹಿಸುತ್ತಿದೆ. ಮುಂಗಾರಿನಿಂದಾಗಿ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಭೂಕುಸಿತ, ಪ್ರವಾಹ, ಮರಗಳು ಧರೆಗುರುಳಿ ಹೆಚ್ಚು ನಷ್ಟವಾಗಿದೆ ಎಂದು ಹಿರಿಯ ವಿಪತ್ತು ನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
ಮುಖ್ಯ ಕಾರ್ಯದರ್ಶಿ ಡಿ.ಪಿ.ವಹ್ಲಂಗ್ ನೇತೃತ್ವದಲ್ಲಿ ಪರಿಸ್ಥಿತಿ ನಿರ್ವಹಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ತಕ್ಷಣದ ಪರಿಹಾರ ಕಾರ್ಯಗಳನ್ನು ನಿರ್ವಹಿಸಲು 13.5 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
ಪ್ರವಾಹಕ್ಕೆ ಅಸ್ಸಾಂ ತತ್ತರ:ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಇಂದು 6 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಪ್ರಾಣ ಕಳೆದುಕೊಂಡವರ ಸಂಖ್ಯೆ 52ಕ್ಕೇರಿದೆ. 29 ಜಿಲ್ಲೆಗಳಲ್ಲಿ 21.13 ಲಕ್ಷ ಜನರು ಪ್ರವಾಹದ ಪರಿಣಾಮಕ್ಕೆ ಒಳಗಾಗಿದ್ದಾರೆ. ಸುಮಾರು 3,208 ಗ್ರಾಮಗಳು ಪ್ರವಾಹಪೀಡಿತವಾಗಿದ್ದು, 57,018 ಹೆಕ್ಟೇರ್ ಕೃಷಿ ಭೂಮಿ ಮುಳುಗಿದೆ. ಪ್ರವಾಹ ಪೀಡಿತರಿಗೆ ತಾತ್ಕಾಲಿಕವಾಗಿ ನಿರ್ಮಿಸಲಾದ ಕೇಂದ್ರಗಳಲ್ಲಿ 763 ಲಕ್ಷ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ, ಅನೇಕ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪ್ರವಾಹ ಸಂತ್ರಸ್ತರ ಆರೋಗ್ಯದ ದೃಷ್ಟಿಯಿಂದ ಅನೇಕ ಜಿಲ್ಲೆಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 38ಕ್ಕೇರಿಕೆ