ಕರ್ನಾಟಕ

karnataka

ETV Bharat / bharat

ಕೇಂದ್ರ ಸರ್ಕಾರ - ರೈತರ ಮೂರನೇ ಸಭೆ ನಿರ್ಣಯಗಳಿಲ್ಲದೇ ಮುಕ್ತಾಯ: ಭಾನುವಾರ ಮತ್ತೊಂದು ಸಭೆ - ಕೇಂದ್ರ ಸರ್ಕಾರ ರೈತರ ಮಾತುಕತೆ

ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಮೂರನೇ ಮಾತುಕತೆಯೂ ಯಾವುದೇ ಫಲ ಕಂಡಿಲ್ಲ. ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.

ರೈತರ ಮೂರನೇ ಸಭೆ ಮುಕ್ತಾಯ
ರೈತರ ಮೂರನೇ ಸಭೆ ಮುಕ್ತಾಯ

By PTI

Published : Feb 16, 2024, 6:54 AM IST

ಚಂಡೀಗಢ:ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಗುರುವಾರ ನಡೆದ ಮ್ಯಾರಾಥಾನ್​ ಸಭೆ ಯಾವುದೇ ನಿರ್ಣಯಗಳಿಲ್ಲದೇ ಮುಕ್ತಾಯವಾಗಿದೆ. ಚರ್ಚೆ ಸಕಾರಾತ್ಮಕವಾಗಿ ಸಾಗಿದೆ. ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗೆ ಕಾನೂನು ಮಾನ್ಯತೆ, ರೈತರಿಗೆ ಪಿಂಚಣಿ ಸೇರಿ ಹಲವು ಬೇಡಿಕೆಗಳನ್ನು ಜಾರಿಗೆ ತರಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಅದರ ಸಾಧಕ ಬಾಧಕಗಳ ಬಗ್ಗೆ ದೀರ್ಘ ಚರ್ಚೆ ನಡೆಯಬೇಕಿದೆ ಎಂದು ಸರ್ಕಾರ ವಾದಿಸುತ್ತಿದೆ. ಇದರಿಂದ ಮೂರೂ ಸಭೆಗಳು ಯಾವುದೇ ನಿರ್ಣಯಗಳಿಲ್ಲದೇ ಮುಗಿದಿವೆ.

ಇಲ್ಲಿನ ಮಹಾತ್ಮ ಗಾಂಧಿ ರಾಜ್ಯ ಆಡಳಿತ ಭವನದಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾದ ಸಭೆಯು ಸತತ 5 ಗಂಟೆ ನಡೆಯಿತು. ಈ ಮ್ಯಾರಥಾನ್​ ಮಾತುಕತೆಯಲ್ಲಿ ಕೇಂದ್ರ ಕೃಷಿ ಸಚಿವ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಭಾಗವಹಿಸಿದ್ದರು. ರೈತರ ಪರವಾಗಿ ಎಸ್‌ಕೆಎಂ (ರಾಜಕೀಯೇತರ) ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಮತ್ತಿತರರು ಇದ್ದರು.

ಸಕಾರಾತ್ಮಕ ಚರ್ಚೆ:ಸಭೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅರ್ಜುನ್​ ಮುಂಡಾ, ಚರ್ಚೆ ಸಕಾರಾತ್ಮಕವಾಗಿ ಸಾಗಿದೆ. ಹಲವು ಮಹತ್ವದ ವಿಷಯಗಳ ಬಗ್ಗೆ ರೈತರ ಜೊತೆ ಮಾತುಕತೆ ನಡೆಸಲಾಗಿದೆ. ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಒಟ್ಟಾಗಿ ಕುಳಿತು ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಭಾಗವಹಿಸಿದ್ದರು. ರೈತ ಮುಖಂಡರು ಮತ್ತು ಸರ್ಕಾರದ ನಡುವೆ ವಿಸ್ತೃತ ಚರ್ಚೆ ನಡೆದಿದೆ. ಪ್ರತಿ ವಿಷಯದ ಬಗ್ಗೆಯೂ ವಿಸ್ತೃತ ಚರ್ಚೆ ನಡೆದು ಹಲವು ವಿಷಯಗಳ ಬಗ್ಗೆ ಒಮ್ಮತ ಮೂಡಿದೆ ಎಂದು ತಿಳಿಸಿದರು.

ಸಂಗ್ರೂರ್, ಪಟಿಯಾಲ ಮತ್ತು ಫತೇಘರ್ ಸಾಹಿಬ್‌ನ ಪ್ರದೇಶಗಳಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ, ಡ್ರೋನ್​ ಮೂಲಕ ಅಶ್ರುವಾಯು ಬಳಕೆ ಮಾಡಿದ ಹರಿಯಾಣ ಪೊಲೀಸರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಅಲ್ಲಿನ ಸರ್ಕಾರದ ಜೊತೆ ಮಾತನಾಡುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು.

ನಮ್ಮ ಬೇಡಿಕೆ ಅಂಗೀಕರಿಸಿ:ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾಕ್ಕೆ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳ ಕುರಿತು ವಿಸ್ತೃತ ಚರ್ಚೆ ಮಂಡಿಸಿದೆವು. ಕೇಂದ್ರ ಸಚಿವರು ಇವುಗಳ ಅನುಷ್ಠಾನಕ್ಕೆ ಸಮಯ ಬೇಕು ಕೋರಿದರು. ಸಕಾರಾತ್ಮಕ ಫಲಿತಾಂಶ ಬರಬೇಕು. ಯಾವುದೇ ಘರ್ಷಣೆಯನ್ನು ನಾವು ಬಯಸುದಿಲ್ಲ. ಸರ್ಕಾರ ಇವುಗಳಿಗೆ ಒಪ್ಪಿಗೆ ನೀಡದಿದ್ದರೆ, ದೆಹಲಿ ಚಲೋ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.

ರೈತರು ಮತ್ತು ಸರ್ಕಾರದ ನಡುವಿನ ಮೂರನೇ ಸುತ್ತಿನ ಮಾತುಕತೆ ಇದಾಗಿದೆ. ಫೆಬ್ರವರಿ 8 ಮತ್ತು 12 ರಂದು ನಡೆದ ಮೊದಲೆರಡು ಸುತ್ತಿನ ಸಂವಾದಗಳಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.

ಇದನ್ನೂ ಓದಿ:ದಿಲ್ಲಿ ಚಲೋ: ಡ್ರೋನ್‌ ದಾಳಿ ತಡೆಯಲು ಗಾಳಿಪಟ ಹಾರಿಸಿದ ರೈತರು

ABOUT THE AUTHOR

...view details