ಕರ್ನಾಟಕ

karnataka

ETV Bharat / bharat

ಹಿಂದೂಗಳ ನಂಬಿಕೆ ಅಪಹಾಸ್ಯ, 'ಕಟಾ ಕಟ್ ದಿವಸ್​' ಆಚರಣೆ, ಬಾಲಕ ಬುದ್ಧಿ; ರಾಹುಲ್​ ವಿರುದ್ಧ ಕ್ರಮಕ್ಕೆ ಮೋದಿ ಆಗ್ರಹ - PM Modi swipe at Rahul Gandhi - PM MODI SWIPE AT RAHUL GANDHI

ದೇವರ ಪ್ರತಿಯೊಂದು ರೂಪವು ನಮನ ಮತ್ತು ಪೂಜೆಗಾಗಿಯೇ ಹೊರತು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಆದರೆ, ಇಂದು ಇಡೀ ವ್ಯವಸ್ಥೆಯು ಹಿಂದೂ ಧರ್ಮ ಮತ್ತು ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುವುದನ್ನು ಕಲಿತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ಹಾಗೂ ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Rahul Gandhi, PM Modi
ರಾಹುಲ್​ ಗಾಂಧಿ, ಪ್ರಧಾನಿ ಮೋದಿ (ETV Bharat)

By PTI

Published : Jul 2, 2024, 8:02 PM IST

ನವದೆಹಲಿ:ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಸೋಮವಾರ ಮಾಡಿದ ಭಾಷಣವನ್ನು ಪ್ರಧಾನಿ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ನಿನ್ನೆ ಸಂಸತ್ತನ್ನು ದಾರಿತಪ್ಪಿಸಲಾಗಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅದನ್ನು ರಕ್ಷಿಸಲು ಸಾಧ್ಯವಿಲ್ಲ. ಸದನದಲ್ಲಿ ಈ ಸುಳ್ಳಿನ ಸಂಪ್ರದಾಯದ ವಿರುದ್ಧ ಸ್ಪೀಕರ್‌ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ದೇಶ ನಿರೀಕ್ಷಿಸುತ್ತದೆ ಎಂದು ಮೋದಿ ತಿಳಿಸಿದರು.

ಲೋಕಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ತಾನು ಮಾಡಿದ ತಪ್ಪುಗಳನ್ನು ಬಹಿರಂಗಪಡಿಸದೆ, ಸಹಾನುಭೂತಿ ಗಳಿಸಲು ಪ್ರಯತ್ನಿಸಿದ 'ಬಾಲಕ ಬುದ್ಧಿ' (ಬಾಲಿಶ ವರ್ತನೆ) ವ್ಯಕ್ತಿಯ ರೋದನೆಗೆ ಸದನ ಸಾಕ್ಷಿಯಾಗಿದೆ. ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.

ಕಾಂಗ್ರೆಸ್ ಸತತ ಮೂರು ಬಾರಿಯೂ 100 ಸ್ಥಾನಗಳನ್ನು ದಾಟದಿರುವುದು ಇದೇ ಮೊದಲು. ಈ ಸೋಲನ್ನು ಒಪ್ಪಿಕೊಳ್ಳುವ ಬದಲು ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ನಮ್ಮನ್ನು ಸೋಲಿಸಿದರು ಎಂಬ ಕಥನವನ್ನು ನಿರ್ಮಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಲೋಕಸಭೆಯಲ್ಲಿ ಅನುಕಂಪ ಗಿಟ್ಟಿಸಲು ಹೊಸ ನಾಟಕವಾಡಲಾಗಿದೆ ಎಂದು ಮೋದಿ ಟೀಕಿಸಿದರು.

ಜಾಮೀನಿನ ಮೇಲೆ ಹೊರಗೆ:ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗಕ್ಕಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಒಬಿಸಿ ಜನರನ್ನು ಕಳ್ಳರು ಎಂದು ಕರೆದಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಬೇಜವಾಬ್ದಾರಿ ಹೇಳಿಕೆಗಳಿಗಾಗಿ ದೇಶದ ಉನ್ನತ ನ್ಯಾಯಾಲಯದಲ್ಲಿ ಅವರು ಕ್ಷಮೆಯಾಚಿಸಬೇಕಾಯಿತು ಎಂಬ ಸತ್ಯ ಅವರಿಗೆ ತಿಳಿದಿದೆ ಎಂದು ಮೋದಿ ನೇರವಾಗಿ ರಾಹುಲ್​ ಗಾಂಧಿ ವಿರುದ್ಧ ವಾಗ್ಬಾಣ ಬಿಟ್ಟರು.

ಅಲ್ಲದೇ, ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅರಾಜಕತೆ ಹಬ್ಬಿಸುವುದರಲ್ಲಿ ನಿರತವಾಗಿರುವುದು ರಾಷ್ಟ್ರದ ದುರಾದೃಷ್ಟ. ಅವರು ದಕ್ಷಿಣ ಭಾರತಕ್ಕೆ ಹೋಗಿ ಉತ್ತರ ಭಾರತದ ಜನರ ವಿರುದ್ಧ ಮಾತನಾಡುತ್ತಾರೆ, ಉತ್ತರ ಭಾರತಕ್ಕೆ ಹೋದಾಗ ದಕ್ಷಿಣ ಭಾರತದ ವಿರುದ್ಧ ಮಾತನಾಡುತ್ತಾರೆ. ಅವರು ಭಾಷೆಯ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ದೇಶದ ಒಂದು ಭಾಗದ ಪ್ರತ್ಯೇಕತೆಯನ್ನು ಪ್ರತಿಪಾದಿಸಿದ ನಾಯಕರಿಗೆ ಕಾಂಗ್ರೆಸ್ ಸಂಸತ್ತಿನ ಟಿಕೆಟ್ ನೀಡಿತ್ತು ಎಂದು ಪ್ರಧಾನಿ ಹರಿಹಾಯ್ದರು.

ಇವಿಎಂ, ಸಂವಿಧಾನ, ಮೀಸಲಾತಿ ಬಗ್ಗೆ ಸುಳ್ಳು ಹಬ್ಬಿಸಿದರು. ಅದಕ್ಕೂ ಮುನ್ನ ರಫೇಲ್, ಹೆಚ್‌ಎಎಲ್, ಎಲ್‌ಐಸಿ, ಬ್ಯಾಂಕ್‌ಗಳ ಬಗ್ಗೆಯೂ ಸುಳ್ಳು ಹರಡಿದ್ದರು. ನಿನ್ನೆ ಸದನವನ್ನೂ ದಿಕ್ಕು ತಪ್ಪಿಸುವ ಧೈರ್ಯವನ್ನೂ ಮಾಡಿದರು. ಅಗ್ನಿವೀರ್ ಯೋಜನೆ ಬಗ್ಗೆ ಸುಳ್ಳು, ಎಂಎಸ್‌ಪಿ ನೀಡುತ್ತಿಲ್ಲ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದರು. ಇಂತಹ ಪ್ರಯತ್ನಗಳನ್ನು ಮಾಡಿದವರನ್ನು ಬರೀ 'ಬಾಲಕ ಬುದ್ಧಿ' ಎಂದು ಕರೆದು ನಿರ್ಲಕ್ಷಿಸಬಾರದು. ಇದರ ಹಿಂದೆ ಆಳವಾದ ಪಿತೂರಿ ಇದೆ ಎಂದು ಮೋದಿ ರಾಹುಲ್​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ಗೆ ಮಹಿಳೆಯರ ಶಾಪ ತಟ್ಟಲಿದೆ-ಮೋದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 8,500 ರೂಪಾಯಿಗಳನ್ನು ನೀಡಲಾಗುವುದು ಎಂದು ರಾಹುಲ್ ಗಾಂಧಿ​ ಚುನಾವಣಾ ಪ್ರಚಾರದ ವೇಳೆ ಹೇಳಿದ್ದನ್ನು ಉಲ್ಲೇಖಿಸಿದ ಮೋದಿ, ಜುಲೈ 1ರಂದು ದೇಶವು 'ಕಟಾ ಕಟ್​ ದಿವಸ್' ಆಚರಿಸಿದೆ. ಜನರು 8,500 ರೂಪಾಯಿಗಳನ್ನು ಬಂದಿದೆಯೇ ಅಥವಾ ಇಲ್ಲವೇ ಎಂದು ನೋಡಲು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದರು. ಕಾಂಗ್ರೆಸ್ ಈ ಚುನಾವಣೆಗಳಲ್ಲಿ ಜನರನ್ನು ದಾರಿ ತಪ್ಪಿಸಿತು. ನಮ್ಮ ತಾಯಿ ಮತ್ತು ಸಹೋದರಿಯರಿಗೆ 8,500 ರೂ. ನೀಡುವುದಾಗಿ ಸುಳ್ಳು ಹೇಳಿದೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಶಾಪವು ಕಾಂಗ್ರೆಸ್​ಅನ್ನು ನಾಶಪಡಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್​ಗೆ​ ಕಳಂಕ ಭಾಗವಾಗಲಿದೆ:ಅಲ್ಲದೇ, ಹಿಂದೂಗಳನ್ನು ಹಿಂಸಾತ್ಮಕ ಸಮುದಾಯ ಎಂದು ಬಿಂಬಿಸುವ ಸಾಹಸವು ಕಾಂಗ್ರೆಸ್​ ಪಕ್ಷಕ್ಕೆ ಕಳಂಕವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಇದನ್ನು ದೇಶವು ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು 131 ವರ್ಷಗಳ ಹಿಂದೆ ತಾವು ಸಹಿಷ್ಣುತೆಯನ್ನು ಕಲಿಸುವ ಧರ್ಮದಿಂದ ಬಂದವರು ಎಂದು ಜಾಗತಿಕ ಸಮುದಾಯಕ್ಕೆ ಹೇಳಿದ್ದರು. ಆದರೆ, ಇಂದು ಅದನ್ನು ಹಾಳುಮಾಡಲು ಮತ್ತು ದುರ್ಬಲಗೊಳಿಸಲು ಸುಳ್ಳು ಪ್ರಚಾರಗಳು ನಡೆಯುತ್ತಿವೆ ಎಂದು ಮೋದಿ ರಾಹುಲ್​ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ, ಶಕ್ತಿ ವಿರುದ್ಧ ಹೋರಾಟ ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಅದೇ ಕಾಂಗ್ರೆಸ್​ ಪಕ್ಷವು "ಹಿಂದೂ ಭಯೋತ್ಪಾದನೆ" ಎಂಬ ಪದವನ್ನು ಸೃಷ್ಟಿಸಿತ್ತು. ಕೆಲ ದಿನಗಳ ಹಿಂದೆ, ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದೊಂದಿಗೆ ಸಮೀಕರಿಸಿದವು. ಇಂದು ಇಡೀ ವ್ಯವಸ್ಥೆಯು ಹಿಂದೂ ಧರ್ಮ ಮತ್ತು ಹಿಂದೂ ನಂಬಿಕೆಯನ್ನು ಅಪಹಾಸ್ಯ ಮಾಡುವುದನ್ನು ಕಲಿತಿದೆ. ದೇವರ ಪ್ರತಿಯೊಂದು ರೂಪವು ನಮನ ಮತ್ತು ಪೂಜೆಗಾಗಿಯೇ ಹೊರತು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:1984ರ ನಂತರ ಒಮ್ಮೆಯೂ 250ರ ಗಡಿ ದಾಟದ ಕಾಂಗ್ರೆಸ್, ಈಗ ಪರಾವಲಂಬಿ ಪಕ್ಷ: ಪ್ರಧಾನಿ ಮೋದಿ ಕುಟುಕು

ABOUT THE AUTHOR

...view details