ಕರ್ನಾಟಕ

karnataka

ETV Bharat / bharat

ಮೋದಿ ವಿರುದ್ಧ ಖರ್ಗೆ ವಾಗ್ದಾಳಿ: ಜಾತಿಗಣತಿ ಬಗ್ಗೆ ಪ್ರಧಾನಿ ಮೌನ ಪ್ರಶ್ನಿಸಿದ ಕಾಂಗ್ರೆಸ್​ ಅಧ್ಯಕ್ಷರು - ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಪ್ರಧಾನಿ ಅವರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಕೋಟ್ಯಂತರ ಕೆಳವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹರು ಒಬಿಸಿ ವರ್ಗಕ್ಕೆ ಸೇರಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ ಆರೋಪಿಸಿದ್ದಾರೆ.

Many won't get OBC status Kharge blasts PM Modi over his 'opposition' to caste census
ಮೋದಿ ವಿರುದ್ಧ ಖರ್ಗೆ ವಾಗ್ದಾಳಿ: ಜಾತಿಗಣತಿ ಬಗ್ಗೆ ಪ್ರಧಾನಿ ಮೌನ ಪ್ರಶ್ನಿಸಿದ ಕಾಂಗ್ರೆಸ್​ ಅಧ್ಯಕ್ಷರು

By ETV Bharat Karnataka Team

Published : Feb 9, 2024, 8:02 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿಯಲ್ಲ. ಅವರು ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನ ಬಿಜೆಪಿ ಕಟುವಾದ ಮಾತುಗಳಲ್ಲಿ ಟೀಕಿಸಿದೆ. ಈ ನಡುವೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೋಟ್ಯಂತರ ಭಾರತೀಯರು ಇತರ ಹಿಂದುಳಿದ ವರ್ಗಕ್ಕೆ ಸೇರಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ವೊಂದನ್ನು​ ಮಾಡಿರುವ ಅವರು, ರಾಷ್ಟ್ರವ್ಯಾಪಿ ಜಾತಿ ಗಣತಿಗೆ ಪ್ರಧಾನಿ ವಿರೋಧ ವ್ಯಕ್ತಪಡಿಸಿರುವುದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಅವರ ನಿಲುವಿನಿಂದಾಗಿ ಸಂಕಷ್ಟದಲ್ಲಿರುವ ಕೆಳವರ್ಗದ ಸಮುದಾಯಗಳು ಒಬಿಸಿ ವಿಭಾಗಕ್ಕೆ ಸೇರ್ಪಡೆಗೊಳ್ಳುವುದರಿಂದ ವಂಚಿತಗೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಲಾಗುವುದು ಎಂದು ಹೇಳಿದೆ. ಆದರೆ, ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಅವರ ಈ ಮೌನವು ಕೋಟ್ಯಂತರ ಜನರನ್ನು 'ಸಾಮಾಜಿಕ ನ್ಯಾಯ'ದಿಂದ ವಂಚಿತಗೊಳಿಸುವ ಬೆದರಿಕೆ ಹಾಕುತ್ತಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಇಡೀ ದೇಶಕ್ಕೆ ಸಾಮಾಜಿಕ ನ್ಯಾಯದ ಪಾಠ ಹೇಳುತ್ತಿರುವ ಮೋದಿಜಿ ಅವರ ಜಾತಿಗೆ ದಶಕಗಳ ಹಿಂದೆಯೇ ಒಬಿಸಿ ಸ್ಥಾನಮಾನ ಸಿಕ್ಕಿದೆ. ಅವರೇ "ದೊಡ್ಡ ಒಬಿಸಿ" ಎಂದು ಕರೆದುಕೊಳ್ಳಲು ಆರಂಭಿಸಿದ್ದಾರೆ. ಮೋದಿಜಿಯವರು ಬೀದಿಗಿಳಿದು ಪ್ರತಿಭಟನೆ ಮಾಡದೇ ಅವರ ಸಮುದಾಯಕ್ಕೆ ಒಬಿಸಿ ವರ್ಗದ ಸ್ಥಾನಮಾನ ಸಿಕ್ಕಿದೆ. ಆದರೆ ಕೋಟಿಗಟ್ಟಲೆ ದೇಶದ ಜನರು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಲು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ‘‘ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ತಮ್ಮ ಎಕ್ಸ್ ಖಾತೆಯಲ್ಲಿ ಹರಿಹಾಯ್ದಿದ್ದಾರೆ.

"ಜಾತಿ ಜನಗಣತಿಗೆ ಮೋದಿಯವರ ವಿರೋಧದಿಂದಾಗಿ ಒಬಿಸಿ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗದಂತಹ ಹಲವಾರು ಹಿಂದುಳಿದ ಜಾತಿಗಳು ದೇಶದಲ್ಲಿವೆ" ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ. ಈ ವಿಷಯದಲ್ಲಿ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಖರ್ಗೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಗಣತಿ ನಡೆಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

"ಮಹಾರಾಷ್ಟ್ರ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಲಕ್ಷಾಂತರ ಜನರು ತಮ್ಮ ಜಾತಿಗೆ ಒಬಿಸಿ ಸ್ಥಾನಮಾನ ನೀಡುವಂತೆ ದಶಕಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮೋದಿಜಿ ಒಬಿಸಿಗಳಲ್ಲಿ ವಿಶ್ವ ಗುರುವಾಗಿದ್ದಾರೆ. ಆದರೆ, ಜಾತಿ ಗಣತಿ ಯಾವಾಗ ನಡೆಯಲಿದೆ ಎಂದು ಹೇಳುತ್ತಿಲ್ಲ. ಸಾಮಾಜಿಕ ನ್ಯಾಯವನ್ನು ಜಾರಿಗೆ ತರಲು ಜಾತಿ ಗಣತಿ ಅತ್ಯಂತ ಪ್ರಮುಖವಾಗಿದೆ, ನಾವು ಖಂಡಿತವಾಗಿಯೂ ಜಾತಿ ಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ ಎಂದು ಖರ್ಗೆ ತಮ್ಮ ಪೋಸ್ಟ್‌ನಲ್ಲಿ ವಿವರಣೆ ಕೂಡಾ ನೀಡಿದ್ದಾರೆ.

ಇದಕ್ಕೂ ಮುನ್ನ ಅಂದರೆ ಗುರುವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ವರ್ಗದಲ್ಲಿ ಜನಿಸಿದ ಕಾರಣ ಒಬಿಸಿ ಅಲ್ಲ ಎಂದು ಪ್ರತಿಪಾದಿಸಿದ್ದರು. ಒಡಿಶಾದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಾರ್ವಜನಿಕ ರ‍್ಯಾಲಿಯಲ್ಲಿ ರಾಹುಲ್​ ಗಾಂಧಿ ಈ ಪ್ರತಿಪಾದನೆ ಮಾಡಿದ್ದರು. 'ಬಿಜೆಪಿ ಕಾರ್ಯಕರ್ತರು ನಿಮ್ಮ ಬಳಿಗೆ ಬಂದಾಗಲೆಲ್ಲಾ ಅವರಿಗೆ ಹೇಳಿ, 'ನಮ್ಮ ಪ್ರಧಾನಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ದೇಶಕ್ಕೆ ಸುಳ್ಳು ಹೇಳಿದ್ದಾರೆ. ಅವರು ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ, ಸಾಮಾನ್ಯ ಜಾತಿಗೆ ಸೇರಿದವರು. ಇದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಹೇಳಿ ಎಂದು ಕಾಂಗ್ರೆಸ್​ ಕಾರ್ಯಕರ್ತರಿಗೆ ರಾಹುಲ್​ ಸಲಹೆ ನೀಡಿದ್ದರು.

ಇದನ್ನು ಓದಿ:ಪ್ರಧಾನಿ ನರೇಂದ್ರ ಮೋದಿ ಒಬಿಸಿಯಲ್ಲ, ಸಾಮಾನ್ಯ ವರ್ಗದಲ್ಲಿ ಜನಿಸಿದ್ದಾರೆ: ರಾಹುಲ್​ ಗಾಂಧಿ

ABOUT THE AUTHOR

...view details