ಕರ್ನಾಟಕ

karnataka

ETV Bharat / bharat

ಮರಾಠಾ ಮೀಸಲಾತಿಗಾಗಿ ಮತ್ತೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮನೋಜ್​ ಜಾರಂಗೆ ಪಾಟೀಲ್​ - ಮರಾಠಾ ಮೀಸಲಾತಿ

ಈ ಬಾರಿ ರಾಜ್ಯ ಸರ್ಕಾರ ಮರಾಠಾ ಮೀಸಲಾತಿ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಸಾಮಾಜಿಕ ಹೋರಾಟಗಾರ ಮನೋಜ್​ ಜಾರಂಗೆ ಪಾಟೀಲ್​ ಹೇಳಿದ್ದಾರೆ.

manoj jarange patil
ಮನೋಜ್​ ಜಾರಂಗೆ ಪಾಟೀಲ್​

By ETV Bharat Karnataka Team

Published : Feb 10, 2024, 4:37 PM IST

ಜಾಲ್ನಾ (ಮಹಾರಾಷ್ಟ್ರ): ಮರಾಠಾ ಮೀಸಲಾತಿ ಚಳವಳಿಯ ರೂವಾರಿಯಾಗಿರುವ ಮನೋಜ್​ ಜಾರಂಗೆ ಪಾಟೀಲ್​ ಅವರು ಇಂದಿನಿಂದ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ಗ್ರಾಮವಾದ ಜಾಲ್ನಾದ ಅಂತರವಲಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿರುವ ಅವರು, ಮರಾಠಾ ಮೀಸಲಾತಿ ಅಧಿಸೂಚನೆ ಜಾರಿಯಾಗಬೇಕು. ಎಲ್ಲಾ ಮರಾಠಿಗರಿಗೆ ಕುಂಬಿ ಜಾತಿ ಪ್ರಮಾಣಪತ್ರ ನೀಡಿ, ಒಬಿಸಿ ಕೋಟಾದಡಿ ಮೀಸಲಿಟ್ಟ ಸವಲತ್ತುಗಳು ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಮರಾಠಾ ಮೀಸಲಾತಿ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸುವವರೆಗೆ ಈ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಮನೋಜ್​ ಜಾರಂಗೆ ತಿಳಿಸಿದ್ದಾರೆ. ಉಪವಾಸ ಸತ್ಯಾಗ್ರಹಕ್ಕೆ ಕುಳಿತಿರುವ ಜಾರಂಗೆ ಅವರು, ಕುಂಬಿಗಳೆಂದು ದಾಖಲಾಗಿರುವ ಎಲ್ಲರಿಗೂ ಪ್ರಮಾಣಪತ್ರ ನೀಡಬೇಕು ಹಾಗೂ ಮರಾಠಾ ಮೀಸಲಾತಿ ಅಧಿಸೂಚನೆ ಕುರಿತು ಇನ್ನಷ್ಟು ಸ್ಪಷ್ಟತೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೀಗ ಜಾರಂಗೆ ಅವರ ಬೇಡಿಕೆಗಳನ್ನು ಈಡೇರಿಸಲು ಫೆ.15ರಂದು ವಿಶೇಷ ವಿಧಾನಸಭೆ ಅಧಿವೇಶನವನ್ನು ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿರುವುದನ್ನು ಗಮನಿಸಬಹುದು.

ವಂಶವೃಕ್ಷದಲ್ಲಿರುವ ರಕ್ತಸಂಬಂಧಿಗಳಿಗೆ ಕುಂಬಿ ಜಾತಿ ಪ್ರಮಾಣಪತ್ರ ನೀಡಲು ಕಳೆದ ತಿಂಗಳು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಅರ್ಜಿದಾರರು ಸರಿಯಾದ ದಾಖಲೆಗಳನ್ನು ಒದಗಿಸಿದ ನಂತರವೇ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹೇಳಿದ್ದರು. ಡಿಸಿಎಂ ಫಡ್ನವೀಸ್​ ಅವರ ಹೇಳಿಕೆಯು ಎಲ್ಲಾ ಮರಾಠಿಗರಿಗೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವ ಸರ್ಕಾರದ ಉದ್ದೇಶದ ಬಗ್ಗೆ ಸಮುದಾಯದ ಜನರಲ್ಲಿ ಅನುಮಾನ ಮೂಡಿಸಿತ್ತು. ಹೀಗಾಗಿ ಎಲ್ಲಾ ಮರಾಠಿಗರಿಗೂ ಕುಂಬಿ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಫೆಬ್ರವರಿ 10ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಜಾರಂಗೆ ಪಾಟೀಲ್ ಜನವರಿ 31 ರಂದು ಘೋಷಿಸಿದ್ದರು.

ಮನೋಜ್​ ಜಾರಂಗೆ ಪಾಟೀಲ್​ ಅವರು 2023ರ ಆಗಸ್ಟ್​ 9 ರಿಂದ ಮರಾಠಾ ಮೀಸಲಾತಿಯ ವಿಷಯವಾಗಿ ಪದೇ ಪದೇ ಉಪವಾಸ ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ. ಇದು ಜಾರಂಗೆ ಅವರ ನಾಲ್ಕನೇ ಉಪವಾಸ ಸತ್ಯಾಗ್ರಹವಾಗಿದೆ. ಮೊದಲು 17 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆಗ ಸರ್ಕಾರ 40 ದಿನಗಳ ಕಾಲಾವಕಾಶ ಕೋರಿತ್ತು. ಕೊಟ್ಟ ಅವಧಿಯೊಳಗೆ ಸರ್ಕಾರ ಏನೂ ಮಾಡಿಲ್ಲವೆಂದು ಆರೋಪಿಸಿ, ಜಾರಂಗೆ ಅವರು ಅಕ್ಟೋಬರ್​ 25ರಿಂದ ಮತ್ತೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಉಪವಾಸ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಾಗ ಸರ್ಕಾರ ಎರಡು ತಿಂಗಳ ಕಾಲಾವಕಾಶ ಕೋರಿತ್ತು.

ಇದನ್ನೂ ಓದಿ:ಮರಾಠರಿಗೆ ಒಬಿಸಿ ಮೀಸಲಾತಿ ಘೋಷಿಸಿದ ಸಿಎಂ ಶಿಂಧೆ: ಉಪವಾಸ ಸತ್ಯಾಗ್ರಹ ಕೈಬಿಟ್ಟ ಹೋರಾಟಗಾರರು

ABOUT THE AUTHOR

...view details