ನವದೆಹಲಿ:ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯ ಅಯ್ಯರ್ ಅವರು ರಾಮ ಮಂದಿರ ನಿರ್ಮಾಣ ವಿರೋಧಿಸಿ ಮೂರು ದಿನಗಳ ಉಪವಾಸ ವ್ರತ ಆಚರಿದ್ದರು. ಅಲ್ಲದೇ ಸನಾತನ ಧರ್ಮದ ವಿರುದ್ಧ ಫೇಸ್ಬುಕ್ನಲ್ಲಿ ನಿಂದನಾತ್ಮಕ ಕಾಮೆಂಟ್ಗಳನ್ನು ಪೋಸ್ಟ್ ಕೂಡಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ವಾಸಿಸುತ್ತಿರುವ ಜಂಗಪುರಾದಲ್ಲಿನ ಹೌಸಿಂಗ್ ಸೊಸೈಟಿಯು ಸುರಣ್ಯ ಮತ್ತು ಮಣಿಶಂಕರ್ ಅಯ್ಯರ್ ಅವರಿಗೆ ಪತ್ರ ಬರೆದು, ತಮ್ಮ ಕಾಮೆಂಟ್ಗಳಿಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಸೊಸೈಟಿಯಲ್ಲಿನ ಮನೆ ಖಾಲಿ ಮಾಡಬೇಕು ಎಂದು ಹೇಳಿದೆ.
ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯ ದೆಹಲಿಯ ಜಂಗ್ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವಿರೋಧಿಸಿ ಉಪವಾಸ ವ್ರತ ಕೈಗೊಂಡಿದ್ದ ಸುರಣ್ಯರಿಗೆ ಅವರ ತಾಯಿ ಜೇನುತುಪ್ಪ ತಿನ್ನಿಸುವ ಮೂಲಕ ವ್ರತವನ್ನು ಕೊನೆಗೊಳಿಸಿದ್ದರು. ಸುರಣ್ಯ ಅವರ ಈ ಕ್ರಮ ಹಾಗೂ ಫೇಸ್ಬುಕ್ನಲ್ಲಿನ ಕಾಮೆಂಟ್ಗಳು ಸೊಸೈಟಿಯ ಜನರಲ್ಲಿ ಆಕ್ರೋಶ ಮೂಡಿಸಿದ್ದು, ಇದಕ್ಕಾಗಿ ಸುರಣ್ಯ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
"ಕಾಲೋನಿಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಅಥವಾ ನಿವಾಸಿಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ನಿವಾಸಿಗಳ ಕ್ರಮವನ್ನು ನಾವು ಒಪ್ಪುವುದಿಲ್ಲ" ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. "ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ವಿರುದ್ಧ ಪ್ರತಿಭಟಿಸುವುದಾದರೆ ನೀವು ದಯವಿಟ್ಟು ಮತ್ತೊಂದು ಕಾಲೋನಿಗೆ ಹೋಗುವಂತೆ ನಾವು ನಿಮಗೆ ಸೂಚಿಸುತ್ತೇವೆ. ನಿಮ್ಮ ದ್ವೇಷದ ಕ್ರಮಗಳಿಗೆ ಯಾವುದೇ ವಿರೋಧವಿಲ್ಲದ ಕಡೆಗೆ ನೀವು ಹೋಗಿ ವಾಸಿಸಬಹುದು" ಎಂದು ಅದು ಹೇಳಿದೆ.