ಜಮ್ಮು ಮತ್ತು ಕಾಶ್ಮೀರ:ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರದಲ್ಲಿ ಅಶಾಂತಿ ಮತ್ತೆ ಭುಗಿಲೆದ್ದಿದೆ. ಪಾಕಿಸ್ತಾನದಿಂದ ನುಸುಳುತ್ತಿರುವ ಭಯೋತ್ಪಾದಕರು ಸರಣಿ ದಾಳಿ ನಡೆಸಿ, ನಾಗರಿಕರು ಮತ್ತು ಯೋಧರ ಸಾವಿಗೆ ಕಾರಣವಾಗುತ್ತಿದ್ದಾರೆ. ಮಂಗಳವಾರ ದೋಡಾ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈಚೆಗೆ ಕಥುವಾದಲ್ಲಿ ನಡೆದ ಸೇನಾ ವಾಹನದ ಮೇಲಿನ ದಾಳಿಯಲ್ಲಿ ಐವರು ಸಾವಿಗೀಡಾಗಿ, ಹಲವು ಯೋಧರು ಗಾಯಗೊಂಡಿದ್ದರು.
ಲೋಕಸಭೆ ಚುನಾವಣೆಯ ಬಳಿಕ ಅಂದರೆ, ಜೂನ್ ರಂದು ಫಲಿತಾಂಶದ ದಿನ ವೈಷ್ಣೋದೇವಿಗೆ ತೆರಳುತ್ತಿದ್ದ ನಾಗರಿಕರ ಮೇಲೆ ಉಗ್ರ ದಾಳಿ ನಡೆದಿತ್ತು. ಅದರಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಅದಾದ ಬಳಿಕ 42 ದಿನದಲ್ಲಿ ಸತತ 9 ಉಗ್ರ ದಾಳಿಗಳು ನಡೆದಿವೆ. ಇದರಲ್ಲಿ 12 ಯೋಧರು ಹುತಾತ್ಮರಾದರೆ, 13 ಮಂದಿ ಗಾಯಗೊಂಡಿದ್ದಾರೆ. 10 ನಾಗರಿಕರು ಸಾವಿಗೀಡಾದರೆ, 44 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಹಲವು ಉಗ್ರರನ್ನೂ ಹೊಡೆದುರುಳಿಸಲಾಗಿದ್ದು ನಿಖರ ಮಾಹಿತಿ ಸಿಕ್ಕಿಲ್ಲ.
ಸತತ ದಾಳಿಗಳಲ್ಲಿ ಹಲವು ಉಗ್ರರನ್ನು ಶಿವನ ಪಾದ ಸೇರಿಸಲಾಗಿದೆ. ಆದರೂ, ಕಣಿವೆಯಲ್ಲಿ ಉಗ್ರರ ಉಪಟಳ ನಿಂತಿಲ್ಲ. ಆತಂಕಕಾರಿ ವಿಚಾರವೆಂದರೆ, ಕಣಿವೆಯಲ್ಲಿ 50 ಕ್ಕೂ ಅಧಿಕ ಉಗ್ರರು ಅಡಗಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಜೂನ್ ತಿಂಗಳಿನಿಂದ ಈವರೆಗೂ ಜಮ್ಮು, ಪೂಂಚ್, ರಾಜೌರಿ, ಕಥುವಾ, ದೋಡಾ ಮತ್ತು ರಿಯಾಸಿಯ ಪ್ರದೇಶಗಳಲ್ಲಿ ಭಯೋತ್ಪಾದನೆ ಸಂಬಂಧಿತ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ರೀತಿಯ ಘಟನೆಗಳು ಯಾವಾಗ ಮತ್ತು ಎಲ್ಲಿ ನಡೆದವು ಎಂಬುದರ ಮಾಹಿತಿ ತಿಳಿಯೋಣ.
2021 ರಿಂದ 2024 ರ ನಡುವಿನ ದಾಳಿಗಳ ವಿವರ ಹೀಗಿದೆ
- 08.07.2024 :ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರಿಂದ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿ, ಆರು ಮಂದಿ ಗಾಯಗೊಂಡಿದ್ದರು.
- 04.05.2024:ಭಾರತೀಯ ವಾಯುಪಡೆಯ (ಐಎಎಫ್) ಬೆಂಗಾವಲಿನ ಮೇಲೆ ಪೂಂಚ್‌ನಲ್ಲಿ ಭಯೋತ್ಪಾದಕರಿಂದ ದಾಳಿ ನಡೆದಿತ್ತು. ಇದರಲ್ಲಿ ಓರ್ವ ಯೋಧ ಹುತಾತ್ಮರಾಗಿ, ನಾಲ್ವರು ಗಾಯಗೊಂಡಿದ್ದರು.
- 12.01.2024:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಬೆಂಗಾವಲು ವಾಹನದ ಮೇಲೆ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಭದ್ರತಾ ಸಿಬ್ಬಂದಿ ಪಾರಾಗಿದ್ದರು.
- 21.12.2023:ಪೂಂಚ್ ಜಿಲ್ಲೆಯಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಯೋಧರು ಪ್ರಾಣ ಕಳೆದುಕೊಂಡರು. ಮೂವರು ಗಾಯಗೊಂಡಿದ್ದರು.
- 22.11.2023:ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕಲಾಕೋಟ್ ಅರಣ್ಯದಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
- 12.09.2023:ಅಂದು ರಾಜೌರಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದರು. ಮೂವರು ಗಾಯಗೊಂಡಿದ್ದರು. ಇದರಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದರು.
- 05.05.2023:ರಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿ, ಓರ್ವ ಅಧಿಕಾರಿ ಗಾಯಗೊಂಡಿದ್ದರು.
- 20.04.2023:ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ 5 ಸೈನಿಕರು ಹುತಾತ್ಮರಾಗಿದ್ದರು.
- 11.08.2022:ರಜೌರಿ ಜಿಲ್ಲೆಯ ಪರ್ಗಲ್ ದರ್ಹಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಐವರು ಸೇನಾ ಯೋಧರು ಹುತಾತ್ಮರಾಗಿ, ಇಬ್ಬರು ಆತ್ಮಾಹುತಿ ಭಯೋತ್ಪಾದಕರು ಸಹ ಕೊಲ್ಲಲ್ಪಟ್ಟರು.
- 14.10.2021: ಮೆಂಧರ್ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೆಸಿಒ ಸೇರಿದಂತೆ ನಾಲ್ವರು ಸೈನಿಕರು ಹುತಾತ್ಮರಾದರು.
- 11.10.2021:ಸುರನ್‌ಕೋಟೆ ಅರಣ್ಯದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಜೆಸಿಒ ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ:ದೇಸಾ ಅರಣ್ಯ ಪ್ರದೇಶದಲ್ಲಿ ಉಗ್ರರ ದಾಳಿ: ಭಯೋತ್ಪಾದಕರ ಪತ್ತೆಗಾಗಿ ಭದ್ರತಾ ಪಡೆ ಹೆಲಿಕಾಪ್ಟರ್ಗಳಿಂದ ತೀವ್ರ ಶೋಧ - Terrorist attack