ರುದ್ರಪ್ರಯಾಗ (ಉತ್ತರಾಖಂಡ):ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯಕ್ಕೆ ಮತ್ತೊಂದು ದುರಂತ ಸಂಭವಿಸಿದೆ. ಕೇದಾರನಾಥ ಮಾರ್ಗದ ಗೌರಿಕುಂಡ ಎಂಬಲ್ಲಿ ಸೋಮವಾರ ಸಂಜೆ ಭೂಕುಸಿತ ಉಂಟಾಗಿ ಐವರು ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇನ್ನಷ್ಟು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸೋಮವಾರ ಸಂಜೆ ವೇಳೆ ಯಾತ್ರಾರ್ಥಿಗಳ ತಂಡ ಕೇದಾರನಾಥದಿಂದ ಗೌರಿಕುಂಡದ ಕಡೆಗೆ ಬರುತ್ತಿದ್ದಾಗ ಸೋನಪ್ರಯಾಗದಿಂದ 1 ಕಿಮೀ ದೂರದಲ್ಲಿ ಗುಡ್ಡಕುಸಿತ ಉಂಟಾಗಿದೆ. ಯಾತ್ರಾರ್ಥಿಗಳ ಮೇಲೆ ಗುಡ್ಡ ಜಾರಿದ್ದರಿಂದ ಹಲವರು ಅವಶೇಷಗಳಡಿ ಮಣ್ಣಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್ಡಿಆರ್ಎಫ್) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ಸೋಮವಾರ ಸಂಜೆ ಇಬ್ಬರ ಶವಗಳನ್ನು ಹೊರತೆಗೆಯಲಾಗಿತ್ತು. ಇಂದು ಮೂವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಿನ್ನೆ ಸೋಮವಾರ ಸಂಜೆ ಮಳೆ ಮತ್ತು ಗುಡ್ಡಜರಿತ ಮುಂದುವರಿದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಜೊತೆಗೆ ಹೆದ್ದಾರಿಯನ್ನೂ ಬಂದ್ ಮಾಡಲಾಗಿತ್ತು. ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.