ಮುಂಬೈ (ಮಹಾರಾಷ್ಟ್ರ):ಭೂ ಹಗರಣದಲ್ಲಿ ಆರೋಪಿಯಾಗಿ ಜಾರಿ ನಿರ್ದೇಶನಾಲಯದಿಂದ (ಇಡಿ) ವಿಚಾರಣೆ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಶಾಸಕ ರವೀಂದ್ರ ವೇಕರ್ ಅವರು ಭಾನುವಾರ ಸಿಎಂ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಇಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಬಣ ಬದಲಿಸಿದ್ದಾಗಿ ವಿಪಕ್ಷಗಳು ಆರೋಪಿಸಿವೆ.
ಜೋಗೇಶ್ವರಿ ಪೂರ್ವ ಕ್ಷೇತ್ರದ ಶಾಸಕರಾಗಿರುವ ವೇಕರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಗಜಾನನ ಕೀರ್ತಿಕರ್ ಅವರ ಸಮ್ಮುಖದಲ್ಲಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಕೆಲವು ಬೆಂಬಲಿಗರೊಂದಿಗೆ ಶಿವಸೇನೆಗೆ ಸೇರಿದರು. ಈ ಮೂಲಕ ಉದ್ಧವ್ ಠಾಕ್ರೆ ಅವರ ಬಣದ ಮತ್ತೊಬ್ಬ ಶಾಸಕ ಶಿಂಧೆ ಬಣ ಸೇರಿದ್ದಾರೆ. ರವೀಂದ್ರ ಅವರು ಉದ್ಧವ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.
ಅಭಿವೃದ್ಧಿಗಾಗಿ ಶಿಂಧೆ ಬಣ ಸೇರ್ಪಡೆ:ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ರವೀಂದ್ರ ವೇಕರ್, ನಾನು 50 ವರ್ಷಗಳಿಂದ ಶಿವಸೇನೆಯ ಕಾರ್ಯಕರ್ತನಾಗಿದ್ದೇನೆ. 1974 ರಿಂದ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಕೆಲಸ ಮಾಡಿದ್ದೇನೆ. 4 ಬಾರಿ ಕಾರ್ಪೊರೇಟರ್ ಆಗಿ, ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿರುವುದರಿಂದ ಈಗ ಶಿಂಧೆ ಬಣದ ಶಿವಸೇನೆಗೆ ಸೇರುತ್ತಿದ್ದೇನೆ ಎಂದು ಹೇಳಿದರು. ಇದೇ ವೇಳೆ ವೇಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಶ್ಲಾಘಿಸಿದರು.
ಕೇಂದ್ರದ ಎನ್‌ಡಿಎ ಮತ್ತು ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ವೇಕರ್ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಅವರು ಶಿವಸೇನೆಗೆ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.