ಮುಂಬೈ(ಮಹಾರಾಷ್ಟ್ರ):ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶಾಸಕಾಂಗ ಪಕ್ಷದ ನಾಯಕನಾಗಿ ಅಜಿತ್ ಪವಾರ್ ಭಾನುವಾರ ಆಯ್ಕೆಯಾಗಿದ್ದಾರೆ. ಈ ಹಿಂದೆ ಪಕ್ಷದ ಶಾಸಕಾಂಗ ಪಕ್ಷದ ಉಪ ನಾಯಕನಾಗಿದ್ದ ಅನಿಲ್ ಪಾಟೀಲ್ ಅವರನ್ನು ಅದೇ ಹುದ್ದೆಗೆ ಮರು ಆಯ್ಕೆ ಮಾಡಲಾಗಿದೆ. ದೇವಗಿರಿ ಬಂಗಲೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
41 ಸ್ಥಾನಗಳನ್ನು ಗೆದ್ದಿರುವ ಎನ್‌ಸಿಪಿ, ಈ ಸಭೆಯಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಮತ್ತು ಯಾವ ಖಾತೆಯನ್ನು ಹಂಚಿಕೆ ಮಾಡಬೇಕು ಎಂದು ಚರ್ಚಿಸಿದೆ ಎಂದು ತಿಳಿದು ಬಂದಿದೆ.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪಕ್ಷದ ಮುಖಂಡ ಭುಜಬಲ್, ''ಮಹಾಯುತಿ ಮೈತ್ರಿಕೂಟದ ಯಶಸ್ಸಿಗೆ ಅದರ ಆಡಳಿತ ಮತ್ತು ಲಡ್ಕಿ ಬಹಿನ್ನಂತಹ ಯೋಜನೆ ಕಾರಣ. ಈ ಯೋಜನೆ ಹಣಕಾಸು ಇಲಾಖೆಯ ಮೂಲಕ ನೇರವಾಗಿ ಮಹಿಳೆಯರಿಗೆ ಆರ್ಥಿಕ ಪ್ರಯೋಜನೆ ದೊರೆಯುವುದನ್ನು ಖಚಿತಪಡಿಸಿತು. ಈ ಚುನಾವಣೆಯಲ್ಲಿ ಜನರು ನಮ್ಮ ಮೇಲೆ ಅಪಾರ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ ಮಹಿಳಾ ಮತದಾರರ ಬೆಂಬಲವು ನಮ್ಮ ಮತ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿದೆ'' ಎಂದು ಹೇಳಿದರು.