ಜಲಗಾಂವ್ (ಮಹಾರಾಷ್ಟ್ರ): ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಗುಜರಾತ್ ಪೆಟ್ರೋಲ್ ಪಂಪ್ ಬಳಿಯ ಜಲಗಾಂವ್ ನಗರದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಮೇಲೆ ಬುಧವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. MH14 CL0716 ಎಂಬ ಆಂಬ್ಯುಲೆನ್ಸ್ ಇದಾಗಿದ್ದು, ಮನೀಶಾ ಎಂಬ ಗರ್ಭಿಣಿಯನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.
ಬೆಂಕಿ ಹೊತ್ತಿಕೊಂಡಿರುವುದನ್ನು ಅರಿತ ಚಾಲಕ ಆಂಬ್ಯುಲೆನ್ಸ್ನಿಂದ ಕೆಳಗೆ ಜಿಗಿದಿದ್ದಾನೆ. ಸ್ಫೋಟದಲ್ಲಿ ಆಂಬ್ಯುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಫೋಟದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಆಂಬ್ಯುಲೆನ್ಸ್ಗೆ ಬೆಂಕಿಹೊತ್ತಿಕೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಸುತ್ತಲೂ ಆವರಿಸುತ್ತಾ ಬಂದಿದ್ದು, ಬಳಿಕ ಆಂಬ್ಯುಲೆನ್ಸ್ ಒಳಗಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಮೀಪದಲ್ಲಿದ್ದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿರುವುದು ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಭಾರೀ ಎತ್ತರಕ್ಕೆ ಚಿಮ್ಮಿದೆ. ವಾಹನ ತುಂಡಾಗಿ 150 ಅಡಿ ಎತ್ತರಕ್ಕೆ ಹಾರಿದೆ. ಸ್ಫೋಟದ ನಡುಕ ಸುಮಾರು 500 ಮೀಟರ್ ದೂರದವರೆಗೆ ಆವರಿಸಿತ್ತು. ಭಯದಲ್ಲಿ ಜನ ದಿಕ್ಕಾಪಾಲಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.