ಬಾರಾಮತಿ (ಮಹಾರಾಷ್ಟ್ರ):ಬಾರಾಮತಿಯ ಭಿಗ್ವಾನ್ ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಕಾರಣವೇನು? ಇಂದು ನಸುಕಿನ ಜಾವ ಈ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ ನಾಲ್ವರು ಟ್ರೈನಿ ಪೈಲಟ್‌ಗಳು ಟಾಟಾ ಹ್ಯಾರಿಯರ್ ವಾಹನದಲ್ಲಿ ಬಾರಾಮತಿಯಿಂದ ಭಿಗ್ವಾನ್‌ಗೆ ಬರುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎಲ್ಲಾ ಅಪ್ರೆಂಟಿಸ್ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದರು. ಇವರಲ್ಲಿ ಬಿಹಾರ, ದೆಹಲಿ, ರಾಜಸ್ಥಾನದ ಹುಡುಗಿ ಮತ್ತು ಮಹಾರಾಷ್ಟ್ರದ ಹುಡುಗ ಪ್ರಯಾಣಿಸುತ್ತಿದ್ದರು.
ಅಪಘಾತಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತದ ನಂತರ ಸ್ಥಳೀಯರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಭಿಗ್ವಾನ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಓದಿ:ಪಾನೀಯದೊಂದಿಗೆ ರಾಸಾಯನಿಕ ಬೆರಸಿ 12 ಜನರ ಕೊಲೆ ಮಾಡಿದ್ದ ಮಾಟಗಾರ, ಪೊಲೀಸ್ ಕಸ್ಟಡಿಯಲ್ಲಿ ಸಾವು