ವಾರಣಾಸಿ(ಉತ್ತರ ಪ್ರದೇಶ):ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ನಿರಂಜನಿ ಅಖಾಡದ ಕೈಲಾಸಾನಂದ ಗಿರಿ ಮಹಾರಾಜರೊಂದಿಗೆ ಶನಿವಾರ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮಹಾಕುಂಭ ಮೇಳವು ಯಾವುದೇ ಅಡೆತಡೆ ಮತ್ತು ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಕೈಲಾಸಾನಂದ ಗಿರಿ ಮಹಾರಾಜರು ಈ ಸಂದರ್ಭದಲ್ಲಿ ಹೇಳಿದರು.
"ಕುಂಭಮೇಳವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳಲಿ ಎಂದು ಮಹಾದೇವನಲ್ಲಿ ಪ್ರಾರ್ಥಿಸಲು ನಾವು ಇಂದು ಕಾಶಿಗೆ ಬಂದಿದ್ದೇವೆ. ಭಗವಾನ್ ಮಹಾದೇವರನ್ನು ಆಹ್ವಾನಿಸಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ದೇವಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ, "ಲಾರೆನ್ ಪೊವೆಲ್ ಜಾಬ್ಸ್ ದೇವಾಲಯದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದು, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ಉದ್ದೇಶಿಸಿದ್ದಾರೆ" ಎಂದು ಮಹಾರಾಜ್ ತಿಳಿಸಿದರು.
ದೇಗುಲದ ಹೊರಗಿನಿಂದಲೇ ದರ್ಶನ ಪಡೆದ ಲಾರೆನ್: "ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ, ಹಿಂದೂ ಅಲ್ಲದವರಿಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿನ ಶಿವಲಿಂಗವನ್ನು ಮುಟ್ಟಲು ಅವಕಾಶವಿಲ್ಲ. ಹೀಗಾಗಿ ಅವರು ಹೊರಗಿನಿಂದಲೇ ಶಿವಲಿಂಗದ ದರ್ಶನ ಮಾಡಿದರು. ಅವರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದು, ಗಂಗಾ ನದಿಯಲ್ಲಿ ಸ್ನಾನವನ್ನೂ ಮಾಡಲಿದ್ದಾರೆ" ಎಂದು ಅವರು ಹೇಳಿದರು.
ನಿರಂಜನಿ ಅಖಾಡಕ್ಕೆ ಯುಎಸ್ಎ ಮೂಲದ ಮಹರ್ಷಿ ವ್ಯಾಸಾನಂದ ಎಂಬುವರು ಹೊಸ ಮಹಾಮಂಡಲೇಶ್ವರರಾಗಿ ನೇಮಕವಾಗಲಿದ್ದಾರೆ ಎಂದು ಮಹಾರಾಜ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.