ಪ್ರಯಾಗರಾಜ್ (ಉತ್ತರ ಪ್ರದೇಶ) :ಸನಾತನಿಗಳ ಬೃಹತ್ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ನಾಲ್ಕೇ ದಿನ ಬಾಕಿ ಉಳಿದಿದೆ. ತ್ರಿವೇಣಿ ಸಂಗಮದಲ್ಲಿ ಭಕ್ತರ ದಂಡು ಸೇರುತ್ತಲೇ ಇದೆ. ಫೆಬ್ರವರಿ 26ರ ಮಹಾಶಿವರಾತ್ರಿಯಂದು ಅಮೃತ ಸ್ನಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಅಂದಿನ ಪುಣ್ಯದಿನದಂದು, ಏಳು ಗ್ರಹಗಳು ಒಂದೇ ಪಥದಲ್ಲಿ ಕಾಣಿಸಲಿವೆ. ಅಪರೂಪದ ಆಕಾಶ ವಿಸ್ಮಯವು ಅಂದು ಜರುಗಲಿದೆ. ಅಸಾಧಾರಣ ಖಗೋಳ ವಿದ್ಯಮಾನದ ಮೂಲಕ ಮಹಾಕುಂಭವೂ ಸಂಪನ್ನವಾಗಲಿದೆ.
ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ 60 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 26 ರಂದು ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಒಟ್ಟಿಗೆ ಒಂದೇ ಪಥದಲ್ಲಿ ಬರಲಿವೆ. ಈ ವಿದ್ಯಮಾನವು ಆಧ್ಯಾತ್ಮಿಕ ಉತ್ಸವಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಲಿದೆ. ಈ ಖಗೋಳ ವಿಸ್ಮಯವು ನಕಾರಾತ್ಮಕ ಗ್ರಹಗಳ ಪ್ರಭಾವ ಕಡಿಮೆ ಮಾಡಿ, ಜಗತ್ತಿಗೆ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಮಹಾಶಿವರಾತ್ರಿಯ ಮೇಲೆ ಗ್ರಹಗಳ ಪ್ರಭಾವ :ಜ್ಯೋತಿಷಿ ಆಚಾರ್ಯ ಹರಿಕೃಷ್ಣ ಶುಕ್ಲರು ತಿಳಿಸುವಂತೆ, 'ಜಗತ್ ಸರ್ವಂ ಗ್ರಹಧೀನಂ'. ಅಂದರೆ ಇಡೀ ವಿಶ್ವವು ಗ್ರಹಗಳಿಂದ ನಿಯಂತ್ರಿಸಲ್ಪಡುತ್ತದೆ. ಋಷಿಗಳು, ಸಪ್ತರ್ಷಿಗಳು ಈ ಗ್ರಹಗಳ ಪ್ರಭಾವದ ಬಗ್ಗೆ ವಿವರಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭದಲ್ಲಿ ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ, ಶನಿಯು ಕುಂಭ ರಾಶಿಯಲ್ಲಿ ಮತ್ತು ಗುರುವು ವೃಷಭ ರಾಶಿಯಲ್ಲಿ ಇದ್ದರು. ಇವೆಲ್ಲವೂ ಶುಭ ಸಂಕೇತಗಳು. ಮಹಾಕುಂಭದ ಕೊನೆಯ ಅಮೃತ ಸ್ನಾನದಂದು ಚಂದ್ರ, ಬುಧ, ಸೂರ್ಯ ಮತ್ತು ಶನಿಯು ಕುಂಭ ರಾಶಿಯಲ್ಲಿದ್ದರೆ, ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿರುತ್ತಾರೆ. ಗುರುವು ವೃಷಭ ರಾಶಿಯಲ್ಲಿ, ಮಂಗಳ ಮಿಥುನ ರಾಶಿಯಲ್ಲಿರುತ್ತದೆ. ಈ ಜೋಡಣೆಗಳು ಅತ್ಯಂತ ಶುಭವಾಗಿದ್ದು, ನಕಾರಾತ್ಮಕತೆಯು ದೂರವಾಗಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.