ರಷ್ಯಾದ ಸೈನಿಕರಿಗೆ ಹಾಜಿಪುರದ ಬೂಟು (ETV Bharat) ವೈಶಾಲಿ (ಬಿಹಾರ):ರಷ್ಯಾದಿಂದ ಭಾರತವು ರಕ್ಷಣಾ ಸಾಮಗ್ರಿಗಳನ್ನು ಖರೀದಿಸುತ್ತಿದೆ. ಅದೇ ರೀತಿಯಾಗಿ ರಷ್ಯಾದ ಸೇನೆಯು ಭಾರತದಿಂದ ಅನೇಕ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ ಬಿಹಾರದ ಹಾಜಿಪುರ್ ಬೂಟುಗಳು ಒಂದಾಗಿದೆ. ಈ ಸುರಕ್ಷಿತ ಬೂಟುಗಳು ರಷ್ಯಾದ ಸೇನೆಯ ಮೊದಲ ಆಯ್ಕೆ ಹೌದು.
ಉಕ್ರೇನ್‌ನೊಂದಿಗೆ ರಷ್ಯಾ ಸುದೀರ್ಘ ಯುದ್ಧದಲ್ಲಿ ತೊಡಗಿದೆ. ಬಿಹಾರದ ಹಾಜಿಪುರದ ಕೈಗಾರಿಕಾ ಪ್ರದೇಶದಲ್ಲಿ ತಯಾರಿಸಲಾಗುವ ಬೂಟುಗಳು ರಷ್ಯಾದ ಸೈನಿಕರಿಗೆ ಆರಾಮದಾಯಕ ಮತ್ತು ದೀರ್ಘಬಾಳಿಕೆಗಾಗಿ ಪ್ರಥಮ ಆದ್ಯತೆ ಆಗಿವೆ. ಅದು ಯುದ್ಧಭೂಮಿಯಾಗಿರಲಿ ಅಥವಾ ಹಿಮದ ನೆಲವೇ ಆಗಿರಲಿ, ರಷ್ಯಾದ ಸೇನೆಯು ಹಾಜಿಪುರದಲ್ಲಿ ವಿಶೇಷವಾಗಿ ತಯಾರಿಸಿದ ಬೂಟುಗಳನ್ನು ನಂಬುತ್ತದೆ. ಏಕೆಂದರೆ, ರಷ್ಯಾದ ಸೈನಿಕರ ಪಾದಗಳಿಗೆ ಕೊರೆಯುವ ಚಳಿಯಲ್ಲೂ ಭಾರತೀಯ ಬೂಟುಗಳು ರಕ್ಷಣೆ ನೀಡುತ್ತವೆ.
ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಬೂಟುಗಳ ತಯಾರಿಕೆಯಲ್ಲಿ ತೊಡಗಿದೆ. ಈ ಕಂಪನಿಯ ಜನರಲ್ ಮ್ಯಾನೇಜರ್ ಶಿವ ಕುಮಾರ್ ರಾಯ್ 2018ರಲ್ಲಿ ಹಾಜಿಪುರದಲ್ಲಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವ ಮುಖ್ಯ ಉದ್ದೇಶದಿಂದ ಶೂಗಳ ತಯಾರಿಕೆ ಪ್ರಾರಂಭಿಸಿದ್ದಾರೆ. ''ಹಾಜಿಪುರದಲ್ಲಿ ನಾವು ಸುರಕ್ಷತಾ ಬೂಟುಗಳನ್ನು ತಯಾರಿಸುತ್ತೇವೆ. ಅದನ್ನು ರಷ್ಯಾಕ್ಕೆ ರಫ್ತು ಮಾಡಲಾಗುತ್ತಿದೆ. ಒಟ್ಟು ರಫ್ತು ರಷ್ಯಾಕ್ಕೆ ಆಗುತ್ತಿದ್ದರೆ, ನಾವು ಕ್ರಮೇಣ ಯುರೋಪಿಯನ್ ಮಾರುಕಟ್ಟೆಯತ್ತ ಕೂಡ ಸಾಗುತ್ತಿದ್ದೇವೆ'' ಎಂದು ರಾಯ್ ತಿಳಿಸಿದ್ದಾರೆ.
ರಷ್ಯಾದ ಸೇನೆಯು ಯಾಕೆ ಈ ಬೂಟುಗಳಿಗೆ ಆದ್ಯತೆ ನೀಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ರಷ್ಯಾದ ಸೇನೆಗೆ ಹಗುರವಾದ, ಜಾರಿದ ಬೂಟುಗಳ ಅಗತ್ಯವಿದೆ. ಈ ಬೂಟುಗಳು ಮೈನಸ್ 40 ಡಿಗ್ರಿ ಸೆಲ್ಸಿಯಸ್‌ನಂತಹ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲವು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಸುರಕ್ಷತಾ ಬೂಟುಗಳನ್ನು ತಯಾರಿಸುತ್ತೇವೆ. ನಾವು ರಷ್ಯಾಕ್ಕೆ ಭಾರತದ ಅತಿದೊಡ್ಡ ರಫ್ತುದಾರರಾಗಿದ್ದೇವೆ. ಮುಂದಿನದಲ್ಲಿ ಇದನ್ನೂ ಹೆಚ್ಚಾಗಬಹುದು ಎಂದು ನಾವು ಭಾವಿಸುತ್ತೇವೆ'' ಎಂದು ಹೇಳಿದ್ದಾರೆ.
ಬೂಟು ತಯಾರಿಕಾ ಘಟಕದಲ್ಲಿರುವ 300 ಜನರು ಕೆಲಸ ಮಾಡುತ್ತಾರೆ. ಈ ಪೈಕಿ ಶೇ.70ರಷ್ಟು ಮಹಿಳೆಯರೇ ಇದ್ದಾರೆ. ಈ ಮೂಲಕ ಮಹಿಳೆಯರಿಗೆ ಗರಿಷ್ಠ ಉದ್ಯೋಗವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಕಳೆದ ವರ್ಷ 100 ಕೋಟಿ ಮೌಲ್ಯದ 1.5 ಮಿಲಿಯನ್ ಜೋಡಿ ಬೂಟುಗಳನ್ನು ರಫ್ತು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಯುರೋಪ್‌ಗೆ ಫ್ಯಾಷನಬಲ್ ಶೂಗಳು: ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಫ್ಯಾಶನ್ ಡೆವಲಪ್‌ಮೆಂಟ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ಮಾತನಾಡಿ, ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಉನ್ನತ ಮಟ್ಟದ ಶೂಗಳನ್ನು ತಯಾರಿಸುವುದು ನಮ್ಮ ಉದ್ದೇಶ. ಫ್ರಾನ್ಸ್, ಇಟಲಿ, ಸ್ಪೇನ್ ಮತ್ತು ಯುಕೆ ನಮ್ಮ ಮುಂದಿನ ಪ್ರಮುಖ ದೇಶಗಳಾಗಿವೆ. ನಾವು ಇತ್ತೀಚೆಗೆ ಬೆಲ್ಜಿಯನ್ ಕಂಪನಿಯನ್ನು ಸೆಳೆದಿದ್ದೇವೆ. ಆರಂಭದಲ್ಲಿ ವಿದೇಶಿ ಕಂಪನಿಗಳಿಗೆ ಕೆಲವು ಅನುಮಾನಗಳಿದ್ದವು. ಆದರೆ, ನಮ್ಮ ಮಾದರಿಯನ್ನು ನೋಡಿದಾಗ ಅವರಿಗೆ ಮನವರಿಕೆಯಾಗಿದೆ. ಕೆಲವು ಕಂಪನಿಗಳು ಮುಂದಿನ ತಿಂಗಳು ಕಾರ್ಖಾನೆಗೆ ಭೇಟಿಗೆ ನೀಡುವ ನಿರೀಕ್ಷೆ ಇದೆ'' ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ಫಲಶೃತಿ: ಸೇನೆಯಲ್ಲಿ ಹೋರಾಡುತ್ತಿರುವ ಎಲ್ಲ ಭಾರತೀಯರ ಬಿಡುಗಡೆಗೆ ರಷ್ಯಾ ಸಮ್ಮತಿ