ಗನ್ ಹಿಡಿದು ರೀಲ್ಸ್ ಮಾಡಿದ ಯುವತಿಯ ವಿಡಿಯೋ ಲಖನೌ (ಉತ್ತರಪ್ರದೇಶ):ಜೀವ ಬೆದರಿಕೆ, ಆತ್ಮರಕ್ಷಣೆಗಾಗಿ ಸರ್ಕಾರವೇ ಬಂದೂಕು ಹೊಂದಲು ಪರವಾನಗಿ ನೀಡುತ್ತದೆ. ಆದರೆ, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ ಎಂಬ ಕರಾರು ಇದೆ. ಅತ್ಯಗತ್ಯ ಬಿದ್ದಾಗ ಮಾತ್ರ ಅದನ್ನು ಬಳಕೆ ಮಾಡಬೇಕು. ಆದರೆ, ಇಲ್ಲೊಬ್ಬ ಯುವತಿ ರೀಲ್ಸ್ ಮಾಡಲು ಅಪಾಯಕಾರಿ ಬಂದೂಕನ್ನು ಬಳಸಿ ಪೇಚಿಗೆ ಸಿಲುಕಿದ್ದಾಳೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿಸಂಹಿತೆ ಜಾರಿಯಲ್ಲಿದೆ. ಹತ್ತು ಹಲವು ನಿಯಮಗಳು ಈ ಸಂದರ್ಭ ಜಾರಿಯಲ್ಲಿರುತ್ತವೆ. ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಅಲರ್ಟ್ ಆಗಿರುತ್ತದೆ. ಈ ವೇಳೆ ಏನೇ ಅಚಾತುರ್ಯ ನಡೆದರೂ ಕ್ರಮ ಎದುರಿಸುವುದು ತಪ್ಪಿದ್ದಲ್ಲ. ರೀಲ್ಸ್ ಗೀಳಿನಿಂದಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಏನಿದು ಪ್ರಕರಣ?:ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ಯುವತಿಯೊಬ್ಬಳು ಕೈಯಲ್ಲಿ ಗನ್ ಹಿಡಿದು ರಸ್ತೆಯಲ್ಲಿ ನಡೆದು ಬರುತ್ತಿದ್ದಾಳೆ. ಹಿಂದೆ ಎರಡು ಐಷಾರಾಮಿ ಕಾರುಗಳು ಸಾಗಿ ಬರುತ್ತಿವೆ. 20 ಸೆಕೆಂಡುಗಳ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ಯುವತಿಗೆ ಸಂಕಷ್ಟ ತಂದೊಡ್ಡಿದೆ. ನೀತಿಸಂಹಿತೆ ಜಾರಿ ಮತ್ತು ಬಂದೂಕನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ವಿಡಿಯೋವನ್ನು ವೀಕ್ಷಿಸಿದವರು ಪೊಲಿಸರಿಗೆ ದೂರು ನೀಡಿದ್ದಾರೆ. ಯುವತಿಯ ನಡೆ ಕಾನೂನಿನ ವಿರುದ್ಧವಾಗಿದೆ. ಈಕೆಯ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದಾರೆ.
ಯುವತಿ ವಿಚಾರಣೆಗೆ ಬುಲಾವ್:ಬಂದೂಕನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ನಿಷೇಧವಿದ್ದರೂ, ಅದನ್ನು ರಾಜಾರೋಷವಾಗಿ ಹಿಡಿದು ರಸ್ತೆಯ ಮೇಲೆ ನಡೆದು ಬಂದ ಯುವತಿಯನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ವಿಡಿಯೋ ಸಾಕ್ಷಿ ಮತ್ತು ಅದರಲ್ಲಿರುವ ವಾಹನಗಳ ಸಂಖ್ಯೆಯನ್ನು ಆಧರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಶೇಷವೆಂದರೆ ಈ ವಿಡಿಯೋ, ಸುಮಾರು 3 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಇದೀಗ ಅದು ವೈರಲ್ ಆಗುತ್ತಿದೆ.
ಸ್ಥಳೀಯರು ಪೊಲೀಸರಿಗೆ ವೈರಲ್ ವಿಡಿಯೋ ಲಭ್ಯವಾಗಿದೆ. ಯುವತಿಯನ್ನು ವಿಚಾರಣೆಗೆ ಕರೆಯಲಾಗಿದೆ. ಗನ್ ಬಳಕೆಗೆ ಪರವಾನಗಿ ಇತ್ತಾ?, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಯಾಕೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಇನ್ಸ್‌ಪೆಕ್ಟರ್ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಅಧಿಕಾರಿ ಅಂಜನಿ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ:ವಾರಾಣಸಿ ಸೇರಿ ದೇಶದ 30 ವಿಮಾನ ನಿಲ್ದಾಣಗಳ ಮೇಲೆ ಬಾಂಬ್ ಬೆದರಿಕೆ: ಭದ್ರತಾ ಸಂಸ್ಥೆಗಳಿಂದ ಹೈ ಅಲರ್ಟ್ ಘೋಷಣೆ - BOMB THREAT AIRPORT