ಲಖನೌ, ಉತ್ತರಪ್ರದೇಶ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಿನ್‌ಹಾಟ್ ಶಾಖೆಯಲ್ಲಿ ಭಾನುವಾರ ಲಾಕರ್‌ಗಳನ್ನು ಮುರಿದು ಅದರಲ್ಲಿದ್ದ ವಸ್ತುಗಳನ್ನು ದೋಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖನೌ ಮತಿಯಾರಿಯಲ್ಲಿರುವ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಟ್ಟಡದೊಳಗಿನ ಗೋಡೆಯನ್ನು ಕೊರೆದು ಕಳ್ಳರು ಬ್ಯಾಂಕ್ ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸಂದೀಪ್ ಸಿಂಗ್ ಹೇಳಿದ್ದಾರೆ. ಮೇಲ್ನೋಟಕ್ಕೆ ನಾಲ್ಕು ಜನರು ಈ ಕೃತ್ಯ ಎಸಗಿದ್ದಾರೆ ಎಂದು ಕಂಡು ಬರುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದರೋಡೆಕೋರರ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳತನದ ಸಮಯದಲ್ಲಿ ಬ್ಯಾಂಕ್‌ನಲ್ಲಿ ಯಾವುದೇ ಎಚ್ಚರಿಕೆ ಅಥವಾ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸಾಕಷ್ಟು ಭದ್ರತಾ ಕ್ರಮಗಳ ಹೊರತಾಗಿಯೂ ದರೋಡೆ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ - IOB ಲಖನೌದಲ್ಲಿರುವ ನಮ್ಮ ಚಿನ್‌ಹಾಟ್ ಶಾಖೆಯಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಹೊರತಾಗಿಯೂ ದರೋಡೆ ನಡೆದಿರುವುದು ದುರದೃಷ್ಟಕರ ಎಂದು ಬ್ಯಾಂಕ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸರ ತನಿಖೆಗೆ ನಾವು ಸಂಪೂರ್ಣವಾಗಿ ಸಹಕರಿಸಲಿದ್ದೇವೆ. ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರಿಗೆ ಅಭಯ ನೀಡಿದ ಬ್ಯಾಂಕ್:ಲಾಕರ್ ಕಳ್ಳತನಗಳಿಗೆ ಬ್ಯಾಂಕ್ ವಿಮಾ ರಕ್ಷಣೆಯನ್ನು ಹೊಂದಿದೆ. ನಮ್ಮ ಗ್ರಾಹಕರು ಮತ್ತು ಅವರ ಆಸ್ತಿಗಳ ಸುರಕ್ಷತೆ ಮತ್ತು ಭದ್ರತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಇದನ್ನು ಓದಿ:ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ: ಸಿಗದ ಕಳ್ಳರು, ಅಡವಿಟ್ಟ ಚಿನ್ನಾಭರಣಕ್ಕಾಗಿ ಪಟ್ಟು ಹಿಡಿದ ಗ್ರಾಹಕರು!
ಲಾಕರ್ ಬಗ್ಗೆ ಆರ್‌ಬಿಐ ನಿಯಮಾವಳಿಗಳು ಏನು ಹೇಳುತ್ತವೆ?: ಯಾವುದೇ ಬ್ಯಾಂಕ್‌ನಲ್ಲಿ ಕಳ್ಳತನ ಅಥವಾ ಅಗ್ನಿ ಅನಾಹುತ ಸಂಭವಿಸಿದರೆ, ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಹಾನಿಯಾದರೆ, ಬ್ಯಾಂಕ್ ನೀಡಿದ ದಾಖಲೆಗಳ ಅನ್ವಯ ನೂರು ಪ್ರತಿಶತ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಅವರಿಗೆ ಪರಿಹಾರ ನೀಡುತ್ತವೆ.
ಉದಾಹರಣೆಗೆ ಒಬ್ಬ ವ್ಯಕ್ತಿ ಬ್ಯಾಂಕ್‌ನಲ್ಲಿ ಇಟ್ಟಿರುವ 40 ಗ್ರಾಂ ಚಿನ್ನ ಕಳ್ಳತನವಾಗಿದ್ದರೆ ಆತನ ಬಳಿ ಇರುವ ದಾಖಲೆಗಳ ಆಧಾರದ ಮೇಲೆ ಪ್ರಸ್ತುತ ಮಾರುಕಟ್ಟೆ ಬೆಲೆಯ ಪ್ರಕಾರ ಒಟ್ಟು 40 ಗ್ರಾಂ ಚಿನ್ನದ ಮೌಲ್ಯವನ್ನು ಬ್ಯಾಂಕ್ ಪಾವತಿಸುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ ಪ್ರತಿ ಇಲಾಖೆಗೆ ವರ್ಷಕ್ಕೊಮ್ಮೆ ವಿಮಾ ಸೌಲಭ್ಯ ನೀಡಲಾಗುತ್ತದೆ. ಇದು ವರ್ಷದಲ್ಲಿ ಬ್ಯಾಂಕಿನ ಸಾಲದ ವಹಿವಾಟುಗಳು ಮತ್ತು ನಗದು ಹರಿವಿನ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮಗಳ ಪ್ರಕಾರ ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎನ್ನುತ್ತಾರೆ ಬ್ಯಾಂಕರ್‌ಗಳು.
ವೈಯಕ್ತಿಕ ಲಾಕರ್‌ಗಳಲ್ಲಿನ ಹಣಕ್ಕೆ ಗ್ರಾಹಕರೇ ಜವಾಬ್ದಾರರಾಗಿರುತ್ತಾರೆ: ಗ್ರಾಹಕರು ವೈಯಕ್ತಿಕ ಲಾಕರ್‌ಗಳಲ್ಲಿ ಇರಿಸಲಾಗಿರುವ ಬೆಲೆಬಾಳುವ ಆಭರಣಗಳು, ದಾಖಲೆಗಳು ಮತ್ತು ನಗದಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಗ್ರಾಹಕರು ಲಾಕರ್‌ಗಳಲ್ಲಿ ಏನನ್ನು ಇಡುತ್ತಾರೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ನೋಡುವುದಿಲ್ಲ. ಯಾವುದೇ ಅವಘಡ ಸಂಭವಿಸಿ ಲಾಕರ್ ಗಳಲ್ಲಿದ್ದ ಬೆಲೆಬಾಳುವ ನಗದು ಹಾಗೂ ಚಿನ್ನಾಭರಣ ನಷ್ಟವಾದರೆ ಬ್ಯಾಂಕ್ ಜವಾಬ್ದಾರ ಆಗಿರುವುದಿಲ್ಲ. ವೈಯಕ್ತಿಕ ಲಾಕರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ನಗದು ಮತ್ತು ಆಭರಣಗಳನ್ನು ಇಡದೇ ಇರುವುದು ಉತ್ತಮ. ಯಾವುದೇ ಅವಘಡ ಸಂಭವಿಸಿದರೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಬ್ಯಾಂಕ್‌ಗಳು ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಹಣ ದೋಚಲು ಬ್ಯಾಂಕ್‌ಗೆ ನುಗ್ಗಿದ ಖದೀಮರು: ಕ್ಯಾಷಿಯರ್ ಮೇಲೆ ಗುಂಡಿನ ದಾಳಿ