ಪುರಿ (ಒಡಿಶಾ):ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಯು ವೈಭವದಿಂದ ಭಾನುವಾರ ಜರುಗಿತು. 12ನೇ ಶತಮಾನದ ಜಗನ್ನಾಥ ದೇವಸ್ಥಾನದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ಗುಂಡಿಚಾ ದೇವಸ್ಥಾನದವರೆಗೆ ನಡೆದ ಬೃಹತ್ ರಥೋತ್ಸವಗಳಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರು.
ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲನಾದ ಸರಸ್ವತಿ ಅವರು ತಮ್ಮ ಶಿಷ್ಯರೊಂದಿಗೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರರ ರಥಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಜೆ 5.20ರ ಸುಮಾರಿಗೆ ರಥ ಯಾತ್ರೆ ಪ್ರಾರಂಭವಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಜಗನ್ನಾಥ ರಥದ ಹಗ್ಗಗಳನ್ನು ಎಳೆಯುವ ಸಾಂಕೇತಿಕವಾಗಿ ಮಹಾ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಒಡಿಶಾ ರಾಜ್ಯಪಾಲ ರಘುಬರ್ ದಾಸ್, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾಥ್ ನೀಡಿದರು. ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ನವೀನ್ ಪಟ್ನಾಯಕ್ ಸಹ ರಥ ಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ರಥ ಯಾತ್ರೆಕ್ಕೆ ಸಾಕ್ಷಿಯಾದ ಭಕ್ತರು: ಸುಮಾರು 45 ಅಡಿ ಎತ್ತರದ ಬಲಭದ್ರ ದೇವರ ರಥವನ್ನು ಸಾವಿರಾರು ಜನರು ಎಳೆದರು. ನಂತರ ದೇವಿ ಸುಭದ್ರಾ ಮತ್ತು ಜಗನ್ನಾಥನ ರಥಗಳನ್ನು ಎಳೆಯಲಾಗುತ್ತದೆ. ಲಯಬದ್ಧವಾಗಿ ತಾಳ ಮತ್ತು ಕೈ ಡೋಲುಗಳನ್ನು ಬಾರಿಸುತ್ತಾ, ದೇವಾಲಯದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಿಧಾನವಾಗಿ ಸಾಗಿತು. ರಥ ಯಾತ್ರೆಕ್ಕೆ ಸಾಕ್ಷಿಯಾದ ಭಕ್ತರು, 'ಜೈ ಜಗನ್ನಾಥ' ಮತ್ತು 'ಹರಿಬೋಲ್' ಎಂದು ಘೋಷಣೆಗಳನ್ನು ಮೊಳಗಿಸಿದರು.
ರಥ ಯಾತ್ರೆ ಪ್ರಾರಂಭಕ್ಕೂ ಮೊದಲು ರಥಗಳ ಮುಂದೆ ವಿವಿಧ ಕಲಾವಿದರ ತಂಡಗಳು 'ಕೀರ್ತನೆಗಳು' ಮತ್ತು ಒಡಿಸಾ ನೃತ್ಯವನ್ನು ಪ್ರದರ್ಶಿಸಿದವು. ಪ್ರತಿ ವರ್ಷ ಈ ಭವ್ಯ ರಥ ಯಾತ್ರೆದಲ್ಲಿ ಸುಮಾರು ಹತ್ತು ಲಕ್ಷ ಭಕ್ತರು ಈ ಪುರಿ ಸೇರುತ್ತಾರೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಭಕ್ತರು ಒಡಿಶಾ ಮತ್ತು ನೆರೆಯ ರಾಜ್ಯಗಳಿಂದ ಬಂದರೆ, ದೇಶ-ವಿದೇಶದಿಂದಲೂ ಅನೇಕರು ಪಾಲ್ಗೊಳ್ಳುತ್ತಾರೆ. ಜಾಗತಿಕವಾಗಿಯೂ ಅತಿದೊಡ್ಡ ಧಾರ್ಮಿಕ ಯಾತ್ರೆಯಲ್ಲಿ ಪುರಿ ರಥ ಯಾತ್ರೆಯೂ ಒಂದಾಗಿದೆ.
ಭದ್ರತೆಗೆ 180 ತುಕಡಿ:ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಬಂದೋಬಸ್ತ್ಗೆ 180 ತುಕಡಿಗಳನ್ನು (ಒಂದು ತುಕಡಿಯು 30 ಸಿಬ್ಬಂದಿ ಒಳಗೊಂಡಿರುತ್ತದೆ) ನಿಯೋಜಿಸಲಾಗಿತ್ತು. ಅಲ್ಲದೇ, ಇತರ ಆಯಕಟ್ಟಿನ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ರಥಯಾತ್ರೆ ನಿಮಿತ್ತ ಪಟ್ಟಣದ ವಿವಿಧೆಡೆ ಹಾಗೂ ಸಮುದ್ರ ತೀರದಲ್ಲಿ ಒಟ್ಟು 46 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ಅಲ್ಲದೇ, ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ಭಕ್ತರ ಮೇಲೆ ವಾಹನಗಳ ಮೂಲಕ ನೀರು ಚಿಮ್ಮಿಸಲಾಯಿತು.
ಓರ್ವ ಸಾವು:ಬಿಗಿ ಬಂದೋಬಸ್ತ್ ನಡುವೆಯೂ ರಥ ಯಾತ್ರೆಯಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಥ ಯಾತ್ರೆಯ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಪುರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಉಸಿರುಗಟ್ಟುವಿಕೆಯಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಗೋಕಾಕ್ ಫಾಲ್ಸ್ ಬಳಿ ಪ್ರವಾಸಿಗರ ಹುಚ್ಚಾಟ: ನೀರು ಧುಮ್ಮಿಕ್ಕುವ ಸಮೀಪ ನಿಂತು ಸೆಲ್ಫಿಗೆ ಪೋಸ್